ದೇಶ

ರಾಹುಲ್ ಗಾಂಧಿ ಆರೋಪಕ್ಕೆ ಆರಗ ಜ್ಞಾನೇಂದ್ರ ತಿರುಗೇಟು: “ಮತಗಳ್ಳತನ ಕಾಂಗ್ರೆಸ್ ಪರಂಪರೆ, ಇಂದಿರಾ ಗಾಂಧಿಯವರೇ ಉದಾಹರಣೆ”

Published

on

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಮತಗಳ್ಳತನದ ಇತಿಹಾಸ ಬಹಳ ಹಿಂದಿನಿಂದಲೇ ಇದೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಹುಲ್ ಗಾಂಧಿ ಈಗ ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪ ಮಾಡುತ್ತಿದ್ದಾರೆ. ಆದರೆ, ಅವರ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೇ 1970ರ ದಶಕದಲ್ಲಿ ರಾಯ್‌ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಮತಗಳ್ಳತನದಿಂದ ಗೆದ್ದಿದ್ದರು” ಎಂದು ಹೇಳಿದರು.

ಅವರು ಮುಂದುವರೆದು, “ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ ಸದಸ್ಯತ್ವ ರದ್ದು ಮಾಡಿತ್ತು. ಬಳಿಕ ಸುಪ್ರೀಂ ಕೋರ್ಟ್ ತೀರ್ಪನ್ನೂ ಎತ್ತಿಹಿಡಿದರೂ ಅವರು ಅಧಿಕಾರಕ್ಕೆ ಅಂಟಿಕೊಂಡಿದ್ದರು. ತುರ್ತು ಪರಿಸ್ಥಿತಿ ಹೇರಿದವರು, ಪ್ರಜಾಪ್ರಭುತ್ವದ ಮೇಲೆ ದಬ್ಬಾಳಿಕೆ ಮಾಡಿದವರು ಕಾಂಗ್ರೆಸ್‌ವೇ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರತಿಭಟನೆಯನ್ನು ಟೀಕಿಸಿದ ಜ್ಞಾನೇಂದ್ರ, “ಚುನಾವಣೆಯ ಬಳಿಕ ತಕ್ಷಣ ಆಕ್ಷೇಪ ಸಲ್ಲಿಸಲು ಅವಕಾಶವಿತ್ತು. ಮತಗಟ್ಟೆಗಳಲ್ಲಿ ಕಾಂಗ್ರೆಸ್ ಪ್ರತಿನಿಧಿಗಳೇ ಇದ್ದರು. ಮೂರು ತಿಂಗಳ ಒಳಗೆ ತಕರಾರು ಸಲ್ಲಿಸಬಹುದಾಗಿದ್ದರೂ ಅವರು ಮಾಡಲಿಲ್ಲ. ಇದೀಗ ಜನರ ಕಿವಿಗೆ ಹೂ ಇಡುವ ರಾಜಕೀಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ರಾಜ್ಯದ ಮಹದೇವಪುರ ಕ್ಷೇತ್ರದ ಅಕ್ರಮ ಆರೋಪದ ಕುರಿತಂತೆ ಅವರು ವ್ಯಂಗ್ಯವಾಡುತ್ತಾ, “ಅಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ರಾಹುಲ್ ಗಾಂಧಿ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವಂತಾಗಿದೆ. ನಿಜಕ್ಕೂ ಸರ್ಕಾರ ವಿಸರ್ಜನೆ ಮಾಡಬೇಕಾದವರು ಸಿದ್ದರಾಮಯ್ಯ” ಎಂದು ಹೇಳಿದರು.

ಈ ಹೇಳಿಕೆಗಳು ರಾಜ್ಯದ ರಾಜಕೀಯ ವಾತಾವರಣವನ್ನು ಮತ್ತಷ್ಟು ತೀವ್ರಗೊಳಿಸಿದೆ.

Trending

Exit mobile version