ದೇಶ
ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ – ನಗರ ನಿವಾಸಿಗಳಿಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಲಕ್ಷಾಂತರ ನಿವಾಸಿಗಳಿಗೆ ರಾಜ್ಯ ಸರ್ಕಾರ ಭಾರೀ ಗುಡ್ ನ್ಯೂಸ್ ನೀಡಿದೆ. ‘ಬಿ-ಖಾತಾ’ ಹೊಂದಿರುವ ನಿವೇಶನ, ಕಟ್ಟಡ, ಫ್ಲಾಟ್‌ಗಳಿಗೆ ‘ಎ-ಖಾತಾ’ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಮೂಲಕ ಬಹುಕಾಲದ ಅಕ್ರಮ–ಸಕ್ರಮ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ರಚಿಸಲಾದ ಬಡಾವಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಹಾಗೂ ಫ್ಲಾಟ್‌ಗಳಿಗೆ ಜಿಬಿಎ ಮಾದರಿಯಲ್ಲಿ ಎ-ಖಾತಾ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರದಿಂದ 10 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ನೇರ ಲಾಭವಾಗಲಿದೆ ಎಂಬ ಅಂದಾಜಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಉಲ್ಲಂಘಿಸಿ ರಚಿಸಲಾದ ಅನಧಿಕೃತ ಬಡಾವಣೆಗಳಲ್ಲಿ ಭೂ ಪರಿವರ್ತನೆ ಇಲ್ಲದೇ ಅಥವಾ ವಿನ್ಯಾಸ ಅನುಮೋದನೆ ಪಡೆಯದೇ ಮಾರಾಟಗೊಂಡ ನಿವೇಶನಗಳು ಹಾಗೂ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳಿಗೆ ಸಕ್ರಮ ಭಾಗ್ಯ ಸಿಗಲಿದೆ. ಈಗಾಗಲೇ ಇಂತಹ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ಹಾಗೂ ಕರ್ನಾಟಕ ಪೌರನಿಗಮಗಳ ಕಾಯ್ದೆ 1976ಕ್ಕೆ ತಿದ್ದುಪಡಿ ತರಲಾಗಿದೆ.
ಬಿ-ಖಾತಾ ಖಾಲಿ ನಿವೇಶನಗಳಿಗೆ ಎ-ಖಾತಾ ಪಡೆಯಲು ಸಾರ್ವಜನಿಕ ರಸ್ತೆ ಸಂಪರ್ಕ, ಭೂಪರಿವರ್ತನೆ, ಕೆಟಿಸಿಪಿ ಕಾಯ್ದೆ ಅಡಿ ವಿನ್ಯಾಸ ಅನುಮೋದನೆ ಸೇರಿದಂತೆ ಸ್ಪಷ್ಟ ಷರತ್ತುಗಳನ್ನು ಸರ್ಕಾರ ನಿಗದಿಪಡಿಸಿದೆ. ಪರವಾನಗಿ ಇಲ್ಲದೇ ನಿರ್ಮಿಸಿದ ಕಟ್ಟಡಗಳಿಗೆ ವಲಯ ನಿಯಮಗಳು ಹಾಗೂ ಮಹಾಯೋಜನೆಗೆ ಅನುಗುಣವಾಗಿದ್ದಲ್ಲಿ ಎ-ಖಾತಾ ಸಿಗಲಿದೆ.
ಅಪಾರ್ಟ್‌ಮೆಂಟ್ ಹಾಗೂ ಬಹುಮಹಡಿ ಕಟ್ಟಡಗಳಲ್ಲಿನ ಘಟಕಗಳಿಗೂ ನಿಯಮ ಪೂರೈಸಿದಲ್ಲಿ ಎ-ಖಾತಾ ನೀಡಲಾಗುವುದು. ಒಟ್ಟಾರೆ ಈ ತೀರ್ಮಾನದಿಂದ ನಗರ ಆಸ್ತಿ ಮಾಲೀಕರಿಗೆ ಕಾನೂನು ಮಾನ್ಯತೆ, ಸಾಲ ಸೌಲಭ್ಯ ಮತ್ತು ಆಸ್ತಿ ಮೌಲ್ಯ ಹೆಚ್ಚಳಕ್ಕೆ ದಾರಿ ತೆರೆದಂತಾಗಿದೆ.