ಮಾಲವಿ ಜಲಾಶಯದಲ್ಲಿ ಕ್ರೌಂಚ್ ಹಕ್ಕಿಗಳ ಮಹಾಸಂಗಮ: ದಕ್ಷಿಣ ಭಾರತದಲ್ಲೇ ದಾಖಲೆ ಸಂಖ್ಯೆ | Hosa Suddi

ದೇಶ

ಮಾಲವಿ ಜಲಾಶಯದಲ್ಲಿ ಕ್ರೌಂಚ್ ಹಕ್ಕಿಗಳ ಮಹಾಸಂಗಮ: ದಕ್ಷಿಣ ಭಾರತದಲ್ಲೇ ದಾಖಲೆ ಸಂಖ್ಯೆ

Published

on

ಬಳ್ಳಾರಿ

ದೂರದ ಸೈಬೀರಿಯಾ ಮತ್ತು ಮಂಗೋಲಿಯಾ ಪ್ರದೇಶಗಳಿಂದ ವಲಸೆ ಬಂದಿರುವ ಕ್ರೌಂಚ್ ಪಕ್ಷಿಗಳು ಈ ಬಾರಿ ಬಳ್ಳಾರಿ ಜಿಲ್ಲೆಯ ಮಾಲವಿ ಜಲಾಶಯ ಪ್ರದೇಶದಲ್ಲಿ ದಾಖಲೆ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. 2020ರಲ್ಲಿ ಕೇವಲ 8 ಕ್ರೌಂಚ್ ಪಕ್ಷಿಗಳು ಮಾತ್ರ ಕಂಡುಬಂದಿದ್ದರೆ, ಕೇವಲ ಆರು ವರ್ಷಗಳ ಅಂತರದಲ್ಲಿ ಇದೀಗ 1,500ಕ್ಕೂ ಅಧಿಕ ಪಕ್ಷಿಗಳು ಇಲ್ಲಿ ತಂಗಿರುವುದು ದಕ್ಷಿಣ ಭಾರತದ ಮಟ್ಟಿಗೆ ಅಪರೂಪದ ದಾಖಲೆ ಆಗಿದೆ.

ಸೂರ್ಯಕಾಂತಿ, ಜವೆಗೋಧಿ ಸೇರಿದಂತೆ ವಿವಿಧ ಬೆಳೆಗಳ ಕಟಾವು ನಂತರ ಹೊಲಗಳಲ್ಲಿ ದೊರೆಯುವ ಆಹಾರ ಕ್ರೌಂಚ್ ಪಕ್ಷಿಗಳಿಗೆ ಪ್ರಮುಖ ಆಕರ್ಷಣೆಯಾಗಿದೆ. ಆಹಾರ ಸೇವನೆಯ ಬಳಿಕ ನೀರಿಗಾಗಿ ಅವು ಮಾಲವಿ ಜಲಾಶಯದ ಉಳಿದಿರುವ ಗುಂಡಿಗಳತ್ತ ಧಾವಿಸುತ್ತಿವೆ. ಆದರೆ ಇದೇ ಪ್ರದೇಶಕ್ಕೆ ದನ-ಕರುಗಳು ಹಾಗೂ ಜನರ ಆಗಮನ ಹೆಚ್ಚಿರುವುದರಿಂದ ಹಕ್ಕಿಗಳಿಗೆ ಅಶಾಂತಿ ಉಂಟಾಗಿದೆ.

ಕೆಲವು ಸಂದರ್ಭಗಳಲ್ಲಿ ಮೀನುಗಾರಿಕೆ ವೇಳೆ ಹಕ್ಕಿಗಳತ್ತ ಕಲ್ಲು ಬೀಸಿರುವ ಘಟನೆಗಳು ನಡೆದಿದ್ದು, ಕೆಲ ಕ್ರೌಂಚ್ ಪಕ್ಷಿಗಳು ಗಾಯಗೊಂಡಿರುವುದೂ ವರದಿಯಾಗಿದೆ. ವಿದೇಶಿ ಅತಿಥಿ ಹಕ್ಕಿಗಳಿಗೆ ಕನಿಷ್ಠ ಕೆಲವು ದಿನಗಳ ಕಾಲ ಸುರಕ್ಷಿತ ವಾತಾವರಣ ಕಲ್ಪಿಸುವ ಜವಾಬ್ದಾರಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮುದಾಯದ ಮೇಲಿದೆ. ಕೆಲಕಾಲ ಮೀನುಗಾರಿಕೆಯನ್ನು ನಿಲ್ಲಿಸಿ, ವಾಚರ್‌ಗಳನ್ನು ನೇಮಿಸುವ ಅಗತ್ಯವಿದೆ.

ಇನ್ನೂ ಸುಮಾರು 12 ದಿನಗಳವರೆಗೆ ಮಾತ್ರ ತಂಗುವ ಈ ಕ್ರೌಂಚ್ ಪಕ್ಷಿಗಳು, ಸುರಕ್ಷತೆ ದೊರೆತಲ್ಲಿ ಮುಂದಿನ ವರ್ಷಗಳಲ್ಲಿಯೂ ಈ ಪ್ರದೇಶಕ್ಕೆ ಮರಳುವ ಸಾಧ್ಯತೆ ಇದೆ.

ಪೌರಾಣಿಕವಾಗಿ ಕ್ರೌಂಚ್ ಹಕ್ಕಿಗೆ ವಿಶಿಷ್ಟ ಸ್ಥಾನವಿದೆ. ಪ್ರೀತಿ, ದಾಂಪತ್ಯ ಮತ್ತು ನಿಷ್ಠೆಯ ಸಂಕೇತವಾಗಿರುವ ಈ ಹಕ್ಕಿಯ ಕುರಿತು ವಾಲ್ಮೀಕಿ ಮುನಿಗಳು ಉಲ್ಲೇಖಿಸಿರುವ ಪ್ರಸಂಗವೇ ರಾಮಾಯಣ ಮಹಾಕಾವ್ಯದ ಪ್ರೇರಣೆಯಾಗಿದೆ ಎಂಬ ನಂಬಿಕೆಯೂ ಇದೆ.

Trending

Exit mobile version