ಬೆಂಗಳೂರು
ಬ್ಯಾಲೆಟ್ ಪೇಪರ್ ಬಳಕೆಗೆ ಕಾನೂನು ತಿದ್ದುಪಡಿ ಅಗತ್ಯವೇ? ಸರ್ಕಾರದಲ್ಲಿ ಗೊಂದಲ!
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲಿಗೆ ಮತಪತ್ರ ಬಳಕೆ ಮಾಡುವ ನಿಟ್ಟಿನಲ್ಲಿ ನಿಯಮ ತಿದ್ದುಪಡಿ ಮತ್ತು ಸುಗ್ರೀವಾಜ್ಞೆ ಜಾರಿಗೆ ರಾಜ್ಯ ಸರ್ಕಾರದ ಅಡಚಣೆಗಳು ಮುಂದುವರೆದಿವೆ. ಈ ಕುರಿತಂತೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಅಂತಿಮ ನಿರ್ಧಾರಕ್ಕಾಗಿ ಕಾನೂನು ತಜ್ಞರ ಅಭಿಪ್ರಾಯ ಕಾದು ನೋಡಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಈಗಾಗಲೇ ಇವಿಎಂ ಬದಲು ಮತಪತ್ರ ಬಳಕೆಗೆ ತೀರ್ಮಾನ ಕೈಗೊಂಡಿದ್ದು, ಅದಕ್ಕಾಗಿ ನಾಲ್ಕು ಪ್ರತ್ಯೇಕ ಕರಡು ವಿಧೇಯಕಗಳು ರೂಪಿಸಲಾಗಿದೆ. ಈ ನಾಲ್ಕು ಕಾಯ್ದೆಗಳಲ್ಲಿ ತಿದ್ದುಪಡಿ ಮಾಡಿದರೆ ಮಾತ್ರ ರಾಜ್ಯ ಚುನಾವಣಾ ಆಯೋಗಕ್ಕೆ ಮತಪತ್ರ ಬಳಸುವಂತೆ ಸೂಚನೆ ನೀಡಲು ಸಾಧ್ಯ.
ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯಿತು. ಆದರೆ, ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ಮತಪತ್ರ ಮೂಲಕ ಚುನಾವಣೆ ನಡೆಸಲು ಅವಕಾಶವಿದೆ ಎಂಬ ನಿರ್ಧಾರವೂ ಪ್ರಸ್ತುತವಾಗಿದೆ.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ, “ಮತಪತ್ರದ ಮೂಲಕ ಚುನಾವಣೆ ನಡೆಸುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಕಡ್ಡಾಯ. ಒಂದು ಅಥವಾ ಎರಡು ದಿನಗಳಲ್ಲಿ ಸರ್ಕಾರ ತನ್ನ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಅವಶ್ಯಕತೆ ಇದ್ದರೆ ಮಾತ್ರ ಸುಗ್ರೀವಾಜ್ಞೆ ಹೊರಡಿಸಲಾಗುವುದು,” ಎಂದು ತಿಳಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ವಿಚಾರದ ಕುರಿತು ಪ್ರತಿಕ್ರಿಯಿಸುತ್ತಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ಸಚಿವರು ಕರೆ ನೀಡಿದ್ದಾರೆ. “ಬಡವರ ಹಕ್ಕುಗಳಿಗೆ ಸರ್ಕಾರ ಬದ್ಧವಾಗಿದೆ,” ಎಂದಿದ್ದಾರೆ.