ಪಾಕ್–ಚೀನಾ ಮೈತ್ರಿ ಅಪಾಯಕಾರಿ: ಜೈಶಂಕರ್‌ಗೆ ಬಲೂಚ್ ನಾಯಕ ಎಚ್ಚರಿಕೆ | Hosa Suddi

ದೇಶ

ಪಾಕ್–ಚೀನಾ ಮೈತ್ರಿ ಅಪಾಯಕಾರಿ: ಜೈಶಂಕರ್‌ಗೆ ಬಲೂಚ್ ನಾಯಕ ಎಚ್ಚರಿಕೆ

Published

on

ನವದೆಹಲಿ: ಬಲೂಚಿಸ್ತಾನದ ಪ್ರಮುಖ ನಾಯಕ ಮೀರ್ ಯಾರ್ ಬಲೂಚ್ ಅವರು ಪಾಕಿಸ್ತಾನ ಮತ್ತು ಚೀನಾ ನಡುವಿನ ಗಟ್ಟಿಯಾಗುತ್ತಿರುವ ಸಂಬಂಧ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ. ಬೀಜಿಂಗ್–ಇಸ್ಲಾಮಾಬಾದ್ ನಡುವಿನ ಕಾರ್ಯತಂತ್ರದ ಮೈತ್ರಿ ಬಲೂಚಿಸ್ತಾನ ಮಾತ್ರವಲ್ಲ, ಭಾರತಕ್ಕೂ ಗಂಭೀರ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಪತ್ರದಲ್ಲಿ, ಪಾಕಿಸ್ತಾನ ನಿಯಂತ್ರಣದಲ್ಲಿರುವ ಬಲೂಚಿಸ್ತಾನ ದಶಕಗಳಿಂದ ದಬ್ಬಾಳಿಕೆ, ಹಿಂಸೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎದುರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮೇ 2025ರಲ್ಲಿ ಬಲೂಚಿಸ್ತಾನ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಣೆ ಮಾಡಿದೆ ಎಂದು ತಿಳಿಸಿದ್ದಾರೆ. 2026ರ ಮೊದಲ ವಾರವನ್ನು “ಬಲೂಚಿಸ್ತಾನ್ ಜಾಗತಿಕ ರಾಜತಾಂತ್ರಿಕ ವಾರ”ವಾಗಿ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಚೀನಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಬಲೂಚ್ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಮಿಲಿಟರಿ ಪಡೆಗಳನ್ನು ಬಲೂಚಿಸ್ತಾನದಲ್ಲಿ ನಿಯೋಜಿಸುವ ಸಾಧ್ಯತೆ ಇದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅಂತಿಮ ಹಂತ ತಲುಪುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಈ ನಡುವೆ, ಭಾರತದ ಆಡಳಿತಾತ್ಮಕ ಕಾರ್ಯವೈಖರಿಯನ್ನು ಮೀರ್ ಯಾರ್ ಬಲೂಚ್ ಬಹಿರಂಗವಾಗಿ ಶ್ಲಾಘಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ 2025ರಲ್ಲಿ ತೆಗೆದುಕೊಂಡ ದಿಟ್ಟ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಆಪರೇಷನ್ ಸಿಂಧೂರ್ ಮೂಲಕ ಭಯೋತ್ಪಾದನಾ ಕೇಂದ್ರಗಳನ್ನು ನಾಶಮಾಡಿದ ಕ್ರಮ ಧೈರ್ಯ ಹಾಗೂ ಪ್ರಾದೇಶಿಕ ಭದ್ರತೆಯ ದೃಢ ನಿಲುವು ಎಂದು ಹೇಳಿದ್ದಾರೆ.

ಶಾಂತಿ, ಅಭಿವೃದ್ಧಿ, ವ್ಯಾಪಾರ, ಭದ್ರತೆ, ಇಂಧನ ಸವಾಲುಗಳು ಮತ್ತು ಗುಪ್ತ ಬೆದರಿಕೆಗಳನ್ನು ತಗ್ಗಿಸುವಲ್ಲಿ ಭಾರತ ಮತ್ತು ಬಲೂಚಿಸ್ತಾನ ನಡುವಿನ ಸ್ನೇಹ, ವಿಶ್ವಾಸ ಹಾಗೂ ಪರಸ್ಪರ ಹಿತಾಸಕ್ತಿಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಅವರು ತಿಳಿಸಿದ್ದಾರೆ. ಕಳೆದ 79 ವರ್ಷಗಳಿಂದ ಬಲೂಚಿಸ್ತಾನದ ಜನರು ಪಾಕಿಸ್ತಾನದ ಆಕ್ರಮಣ ಮತ್ತು ಭಯೋತ್ಪಾದಕ ದಾಳಿಗಳನ್ನು ಸಹಿಸಿಕೊಂಡಿದ್ದಾರೆ ಎಂದು ಹೇಳಿ, ಈ ಪಿಡುಗನ್ನು ಬೇರು ಸಮೇತ ಕಿತ್ತೊಗೆಯುವಲ್ಲಿ ಭಾರತ ನಮ್ಮ ನೈಜ ಬೆಂಬಲಿಗ ಎಂದು ಸ್ಪಷ್ಟಪಡಿಸಿದ್ದಾರೆ.

ಚೀನಾ–ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಕಾರ್ಯತಂತ್ರದ ಮೈತ್ರಿ ಬಲೂಚಿಸ್ತಾನದ ಜನರಿಗೆ ಅತ್ಯಂತ ಅಪಾಯಕಾರಿ ಮಾತ್ರವಲ್ಲ, ಭಾರತಕ್ಕೂ ದೀರ್ಘಕಾಲೀನ ಭದ್ರತಾ ಸವಾಲು ಉಂಟುಮಾಡಲಿದೆ ಎಂದು ಮೀರ್ ಯಾರ್ ಬಲೂಚ್ ಮುಕ್ತ ಪತ್ರದಲ್ಲಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.

Trending

Exit mobile version