ಬಲೂಚಿಸ್ತಾನದಲ್ಲಿ BLAಗೆ ಅಮೆರಿಕ ಶಸ್ತ್ರಾಸ್ತ್ರ? ಪಾಕ್ ಸಚಿವರೇ ಒಪ್ಪಿಕೆ | Hosa Suddi

ದೇಶ

ಬಲೂಚಿಸ್ತಾನದಲ್ಲಿ BLAಗೆ ಅಮೆರಿಕ ಶಸ್ತ್ರಾಸ್ತ್ರ? ಪಾಕ್ ಸಚಿವರೇ ಒಪ್ಪಿಕೆ

Published

on

ಇಸ್ಲಾಮಾಬಾದ್ / ಪಾಕಿಸ್ತಾನ: ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ವಿರುದ್ಧ ದಾಳಿ ನಡೆಸಲು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಅಮೆರಿಕ ನಿರ್ಮಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂಬುದನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳಲ್ಲಿ ದುಬಾರಿ ರೈಫಲ್‌ಗಳು ಮತ್ತು ಥರ್ಮಲ್ ವೆಪನ್‌ಗಳು ಸೇರಿವೆ ಎಂದು ಅವರು ಹೇಳಿದ್ದಾರೆ.

ಖವಾಜಾ ಆಸಿಫ್ ಮಾತನಾಡಿ,
“ಬಂಡುಕೋರರ ಬಳಿ ಇರುವ ಕೆಲ ರೈಫಲ್‌ಗಳು ನಮ್ಮ ಸೇನೆಯಲ್ಲೇ ಇಲ್ಲ. ಒಂದು ರೈಫಲ್ ಮೌಲ್ಯವೇ ಸುಮಾರು $2 ಮಿಲಿಯನ್. ಅಲ್ಲದೇ $4,000–$5,000 ಮೌಲ್ಯದ ಥರ್ಮಲ್ ಶಸ್ತ್ರಾಸ್ತ್ರಗಳನ್ನೂ ಅವರು ಬಳಸುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ಬಲೂಚಿಸ್ತಾನದಲ್ಲಿ ಬಂಡುಕೋರರ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ, ಪಾಕಿಸ್ತಾನ ಸರ್ಕಾರ ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳ ನಿಯೋಜನೆಗೆ ಆದೇಶ ನೀಡಿದೆ. ಪಾಕಿಸ್ತಾನ ಸೇನೆ ಹಲವು ದಿನಗಳಿಂದ ಬಲೂಚಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ.

ಪಾಕಿಸ್ತಾನ ಸೇನೆ ಈಗಾಗಲೇ 200ಕ್ಕೂ ಹೆಚ್ಚು ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರೂ, ಸೇನೆಯಲ್ಲಿಯೂ ಸಾವು-ನೋವು ಸಂಭವಿಸಿದೆ. ಇದರಿಂದ ಧೈರ್ಯಗೊಂಡಿರುವ ಬಲೂಚಿಸ್ತಾನ ಬಂಡುಕೋರರು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಬೌಗೋಳಿಕವಾಗಿ ಬಲೂಚಿಸ್ತಾನ ಪಾಕಿಸ್ತಾನದ ಶೇ.40ಕ್ಕಿಂತ ಹೆಚ್ಚು ಭೂಭಾಗವನ್ನು ಒಳಗೊಂಡಿದ್ದು, ಇಂತಹ ವಿಶಾಲ ಪ್ರದೇಶವನ್ನು ನಿಯಂತ್ರಿಸುವುದು ಅತ್ಯಂತ ಸವಾಲಿನ ಕೆಲಸ ಎಂದು ಖವಾಜಾ ಆಸಿಫ್ ಹೇಳಿದ್ದಾರೆ.
“ಜನನಿಬಿಡ ನಗರಕ್ಕಿಂತ ಇಂತಹ ಪ್ರದೇಶದಲ್ಲಿ ಗಸ್ತು ತಿರುಗುವುದು ಹಾಗೂ ಕಾವಲು ಕಾಯುವುದು ನಮ್ಮ ಸೈನಿಕರಿಗೆ ದೈಹಿಕವಾಗಿ ಅತಿಯಾದ ಒತ್ತಡ ಉಂಟುಮಾಡುತ್ತಿದೆ” ಎಂದು ಅವರು ಒಪ್ಪಿಕೊಂಡಿದ್ದಾರೆ.

ಇನ್ನು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಹತ್ಯೆಗೆ ಕಾರಣವಾದ ಭಯೋತ್ಪಾದಕರೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದು ಪಾಕಿಸ್ತಾನ ಸರ್ಕಾರ ಸ್ಪಷ್ಟಪಡಿಸಿದೆ.
ಬಿಎಲ್‌ಎ ಹೆಸರಿನಡಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಪರಾಧಿ ಗ್ಯಾಂಗ್‌ಗಳು ಕಳ್ಳಸಾಗಣೆಗಾರರಿಗೆ ರಕ್ಷಣೆ ನೀಡುತ್ತಿವೆ ಹಾಗೂ ಪ್ರತ್ಯೇಕತಾವಾದಿ ಸಂಘಟನೆಗಳೊಂದಿಗೆ ನಂಟು ಹೊಂದಿವೆ ಎಂದು ಖವಾಜಾ ಆಸಿಫ್ ಆರೋಪಿಸಿದ್ದಾರೆ.

ಒಟ್ಟಿನಲ್ಲಿ, ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಮತ್ತು ಬಂಡುಕೋರರ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸರ್ಕಾರಕ್ಕೆ ಇದು ದೊಡ್ಡ ಭದ್ರತಾ ಸವಾಲಾಗಿ ಪರಿಣಮಿಸಿದೆ.

Trending

Exit mobile version