Basava Mantapa book: ಬಸವ ಮಂಟಪ ಪುಸ್ತಕ ಮುಟ್ಟುಗೋಲು ಸರ್ಕಾರದಿಂದ ಅಧಿಕೃತ ಆದೇಶ | Hosa Suddi

ಬೆಂಗಳೂರು

Basava Mantapa book: ಬಸವ ಮಂಟಪ ಪುಸ್ತಕ ಮುಟ್ಟುಗೋಲು ಸರ್ಕಾರದಿಂದ ಅಧಿಕೃತ ಆದೇಶ

Published

on

ಬೆಂಗಳೂರು: ಲೇಖಕ ರವಿ ಹಂಜ್ ಬರೆದಿರುವ  ಬಸವ ಮಂಟಪ ಪುಸ್ತಕವನ್ನು(Basava Mantapa book) ಮುಟ್ಟುಗೋಲು ಹಾಕಿಕೊಂಡು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಚನಕಾರ ಬಸವಣ್ಣನವರ ಕುರಿತು ಪುಸ್ತಕದಲ್ಲಿ ಆಕ್ಷೇಪಾರ್ಹವಾಗಿ ಉಲ್ಲೇಖಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸವ ಮಂಟಪ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಆ ನಿರ್ಧಾರದಂತೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 98ರ ಅಡಿಯಲ್ಲಿ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದೇಶದ ಪ್ರಕಾರ ‘ಬಸವ ಮಂಟಪ’ ಪುಸ್ತಕದ ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳು ದೇಶದ ಯಾವುದೇ ಭಾಗದಲ್ಲಿ ಕಂಡುಬಂದರೂ ಅವುಗಳನ್ನು ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ. ಇದರ ಜೊತೆಗೆ ಪುಸ್ತಕದ ವಿತರಣೆಯನ್ನೂ ತಡೆಯುವಂತೆ ನಿರ್ದೇಶನ ನೀಡಲಾಗಿದೆ ಎಂದು ಒಳಾಡಳಿತ ಇಲಾಖೆಯ ಜಂಟಿ ಕಾರ್ಯದರ್ಶಿ ಅರ್ಚನ ಎಂ.ಎಸ್. ತಿಳಿಸಿದ್ದಾರೆ.

https://hosasuddi.in/sadhguru-live-in-relationship-vs-marriage/

Sadhguru: ಲಿವ್-ಇನ್ ಅಥವಾ ಮದುವೆ? ಸಂಬಂಧದ ಬಗ್ಗೆ ಸದ್ಗುರು ಹೇಳಿದ್ದೇನು ಗೊತ್ತಾ?

Basava Mantapa book ಪುಸ್ತಕದಲ್ಲಿ ವಿಶ್ವಗುರು ಬಸವಣ್ಣನವರನ್ನು ಕಳ್ಳ ಮತ್ತು ಕೊಲೆಗಾರನಂತೆ ಬಿಂಬಿಸಿ ಅವಹೇಳನ ಮಾಡಲಾಗಿದೆ ಎಂಬ ಆರೋಪ ವಿವಾದಕ್ಕೆ ಕಾರಣವಾಗಿತ್ತು. ಕೃತಿಯಲ್ಲಿರುವ ಕೆಲವು ಅಂಶಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದರ ಜೊತೆಗೆ ವಿವಿಧ ಪಂಗಡಗಳ ನಡುವೆ ದ್ವೇಷ ಭಾವನೆ ಮೂಡಿಸುವ ಸಾಧ್ಯತೆಯಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

ಈ ವಿಚಾರದಿಂದ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಪುಸ್ತಕದ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಅದರ ವಿತರಣೆ ತಡೆಯಬೇಕು ಮತ್ತು ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ರಾಜ್ಯ ಪೊಲೀಸ್ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ರಾಜ್ಯ ಪೊಲೀಸ್ ಇಲಾಖೆಯ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಈ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಲೇಖಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು.

Basava Mantapa book ಈ ನಡುವೆ ಬಸವ ಮಂಟಪ ಕೃತಿಯ ವಿರುದ್ಧ ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಅವರು, ಸಂಶೋಧನೆಯ ಹೆಸರಿನಲ್ಲಿ ಬಸವಣ್ಣನವರ ಚಾರಿತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಇಂತಹ ಕೃತಿಯನ್ನು ಸಾರಾಸಗಟಾಗಿ ಖಂಡಿಸುವುದಾಗಿ ಹೇಳಿದ್ದ ಅವರು, ಪುಸ್ತಕದಲ್ಲಿ ದಾಖಲಿಸಲಾಗಿರುವ ವಿಚಾರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದರು. ಇದು ಕೇವಲ ಪುಸ್ತಕವಲ್ಲ, ಗ್ರಂಥ ಎಂದು ಹೇಳಲಾಗುತ್ತಿದೆ. ಆದರೆ ಕೃತಿಯ ಪ್ರತಿಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ಲಭ್ಯವಾಗಿಲ್ಲ. ಹೀಗಾಗಿ ಕೃತಿಯಲ್ಲಿರುವ ವಿಚಾರಗಳ ಕುರಿತು ಪರಿಶೀಲನೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದರು.

ಸರ್ಕಾರದ ಅಧಿಕೃತ ಆದೇಶ ಹೊರಬಂದಿರುವ ಹಿನ್ನೆಲೆಯಲ್ಲಿ ‘ಬಸವ ಮಂಟಪ’ ಪುಸ್ತಕದ ಮುದ್ರಿತ ಪ್ರತಿಗಳ ಜತೆಗೆ ಡಿಜಿಟಲ್ ಪ್ರತಿಗಳ ವಿತರಣೆಗೂ ನಿರ್ಬಂಧ ವಿಧಿಸಲಾಗಿದೆ. ಪುಸ್ತಕದ ವಿರುದ್ಧದ ವಿವಾದ ಇದೀಗ ಸರ್ಕಾರದ ಅಧಿಕೃತ ಕ್ರಮದ ಹಂತಕ್ಕೆ ತಲುಪಿದೆ.

https://karnataka.gov.in/

Trending

Exit mobile version