ಬಸವನಗುಡಿ ಕಡಲೆಕಾಯಿ ಪರಿಷೆ ಭವ್ಯ ಆರಂಭ: ಸಚಿವ ರಾಮಲಿಂಗಾರೆಡ್ಡಿ ಚಾಲನೆ | Hosa Suddi

ದೇಶ

ಬಸವನಗುಡಿ ಕಡಲೆಕಾಯಿ ಪರಿಷೆ ಭವ್ಯ ಆರಂಭ: ಸಚಿವ ರಾಮಲಿಂಗಾರೆಡ್ಡಿ ಚಾಲನೆ

Published

on

ಬೆಂಗಳೂರು: ಬಸವನಗುಡಿ ಪ್ರಸಿದ್ಧ ಕಡಲೆಕಾಯಿ ಪರಿಷೆ ಇಂದು (ನವೆಂಬರ್ 17) ಭವ್ಯವಾಗಿ ಆರಂಭಗೊಂಡಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಪರಂಪರೆಯ ಜಾತ್ರೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು. ಬೆಳಗ್ಗೆ 10:40ಕ್ಕೆ ದೊಡ್ಡಬಸವಣ್ಣ ದೇವಾಲಯ ಆವರಣದಲ್ಲಿ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಸಲ್ಲಿಸಿ, ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಸಂಪ್ರದಾಯಬದ್ಧವಾಗಿ ಪರಿಷೆಯನ್ನು ಆರಂಭಿಸಲಾಯಿತು. ಪರಿಷೆ ನವೆಂಬರ್ 21ರವರೆಗೆ ನಡೆಯಲಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕಡಲೆಕಾಯಿ ಪರಿಷೆಯು 500 ವರ್ಷಗಳ ಇತಿಹಾಸ ಹೊಂದಿದ್ದು, ಕೆಂಪೇಗೌಡರ ಕಾಲದಿಂದಲೇ ಸಂಪ್ರದಾಯವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಈ ಬಾರಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಅಂಗಡಿಗಳನ್ನು ತಕ್ಷಣ ಮುಚ್ಚುವಂತೆ ಸೂಚಿಸಲಾಗಿದೆ ಎಂದರು.

ಪರಿಷೆಗೆ ಆಗಮಿಸುವ ಜನರ ಸೌಕರ್ಯಕ್ಕಾಗಿ ಶುಲ್ಕ ರಹಿತ ಅಂಗಡಿಗಳ ವ್ಯವಸ್ಥೆ, ಹಲವು ರಸ್ತೆಗಳಲ್ಲಿ ವಿಶೇಷ ಲೈಟಿಂಗ್, ಹೂವಿನ ಸುಂದರ ಅಲಂಕಾರಗಳನ್ನೂ ಮಾಡಲಾಗಿದೆ. ಕಳೆದ ವರ್ಷ 4–5 ಲಕ್ಷ ಜನ ಪರಿಷೆಗೆ ಹಾಜರಾಗಿದ್ದರೆ, ಈ ಬಾರಿ ಎರಡು ಲಕ್ಷ ಜನ ಹೆಚ್ಚುವರಿ ಆಗಮಿಸುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರು.

ಪರಿಷೆಯ ಯಶಸ್ವಿಗಾಗಿ ಜಿಬಿಎಯಿಂದ ವಿಶೇಷ ಅನುದಾನ ದೊರೆತಿದ್ದು, ಮುಜರಾಯಿ ಇಲಾಖೆ ಸಹ ಹೆಚ್ಚು ಕೆಲಸ ಮಾಡುತ್ತಿದೆ ಎಂದು ಹೇಳಿದರು. “ಹೆಚ್ಚಿನ ಜನರು ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಬಂದು ದೇವಾಲಯಗಳಲ್ಲಿ ದರ್ಶನ ಮಾಡಲಿ” ಎಂದು ಸಚಿವರು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು.

Trending

Exit mobile version