ದೇಶ
“ದಕ್ಷಿಣದ ಇತರ ಭಾಷೆಗಳು ಕನ್ನಡ ಒಪ್ಪಿಕೊಳ್ಳುತ್ತಿಲ್ಲ” — ಬೊಮ್ಮಾಯಿ ವಿಷಾದ
ಬೆಂಗಳೂರು: ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದಲೂ ಹಾಗೂ ಹೊರಗಿನವರಿಂದಲೂ ಸವಾಲುಗಳು ಎದುರಾಗುತ್ತಿವೆ. “ಕನ್ನಡವನ್ನು ದಕ್ಷಿಣದ ಇತರ ಭಾಷೆಗಳು ಸಹ ಒಪ್ಪಿಕೊಳ್ಳುತ್ತಿಲ್ಲ. ನಮ್ಮ ನೆರೆಹೊರೆಯವರೇ ನಮ್ಮನ್ನು ವೈಷಮ್ಯದಿಂದ ನೋಡುತ್ತಾರೆ. ಇದೇ ಸಮಯದಲ್ಲಿ ಕನ್ನಡವನ್ನು ಮತ್ತೆ ಮೇಲಕ್ಕೆ ಎತ್ತುವ ಕೆಲಸ ಆಗಬೇಕು,” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಡಾ. ಸಿ. ಸೋಮಶೇಖರ್ ಮತ್ತು ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಸಂಸ್ಕೃತಿ ಸಂಗಮ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಮಾತು ಕೇಳಬೇಕು, ಮಾತಿಗೆ ಬೆಲೆ ಬರಬೇಕು. ನಾವು ಹೇಳಿದ ಮಾತಿನಂತೆ ನಡೆಯುವ ಶಕ್ತಿಯನ್ನು ಪಡೆಯಬೇಕು,” ಎಂದು ಸಲಹೆ ನೀಡಿದರು.
ಬೊಮ್ಮಾಯಿ ಅವರು ಕನ್ನಡದ ಸಂಸ್ಕೃತಿ, ಸಾಹಿತ್ಯ ಹಾಗೂ ಸಾಮಾಜಿಕ ಜವಾಬ್ದಾರಿಯ ಕುರಿತು ಮಾತನಾಡುತ್ತಾ, “ಕನ್ನಡ ನಾಶವಾಗುವುದಿಲ್ಲ. ಆದರೆ, ಅದನ್ನು ಉಳಿಸಿಕೊಳ್ಳಲು ಜಂಟಿ ಕಾರ್ಯಾಚರಣೆ ಅಗತ್ಯ. ಜಾನಪದ ಲೋಕ ಮತ್ತು ಜಾನಪದ ವಿಶ್ವವಿದ್ಯಾಲಯ ಸೇರಿ ಕಾರ್ಯ ನಿರ್ವಹಿಸಿದರೆ ಕನ್ನಡಕ್ಕೆ ಹೊಸ ಶಕ್ತಿ ಸಿಗುತ್ತದೆ,” ಎಂದು ಹೇಳಿದರು.
ಅವರು ಮತ್ತಷ್ಟು ಹೇಳಿದರು — “ದೇಶ ಎನ್ನುವ ಕಲ್ಪನೆ ಒಂದೇ ಆಗಬೇಕು. ನಾವು ಎಲ್ಲರೂ ಒಗ್ಗಟ್ಟಾಗಿ ನಿಂತರೆ ಮುಂದಿನ ಶತಮಾನ ಯಾರೂ ನಮ್ಮ ಸಂಸ್ಕೃತಿಯನ್ನು ಮುಟ್ಟಲು ಸಾಧ್ಯವಿಲ್ಲ,” ಎಂದು ಹೇಳಿದರು.