ದೇಶ
Kochi ವಿಮಾನದಲ್ಲಿ ಭಯಾನಕ ಕ್ಷಣ! ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಭಾರತೀಯನ ವಿರುದ್ಧ ಪ್ರಕರಣ
ಕೊಚ್ಚಿ: ಕೌಲಾಲಂಪುರದಿಂದ (Kuala Lumpur) ಕೇರಳದ ಕೊಚ್ಚಿಗೆ (Kochi) ಆಗಮಿಸುತ್ತಿದ್ದ ಬಟಿಕ್ ಏರ್ (Batik Air) ವಿಮಾನದಲ್ಲಿ ಪ್ರಯಾಣಿಕನೊಬ್ಬ ಹಾರಾಟದ ಮಧ್ಯೆಯೇ ತುರ್ತು ನಿರ್ಗಮನ ದ್ವಾರ (Emergency Exit) ತೆರೆಯಲು ಯತ್ನಿಸಿದ ಘಟನೆ ಆತಂಕ ಸೃಷ್ಟಿಸಿದೆ. ಘಟನೆ ಸಂಬಂಧ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೂಟನ್ನಾಡ್ ನಿವಾಸಿ ಜಂಶೀರ್ ಅಥನಿಕ್ಕಲ್ ಎಂಬ ಭಾರತೀಯ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಬಟಿಕ್ ಏರ್ನ OD231 ವಿಮಾನವು ಬುಧವಾರ ರಾತ್ರಿ ಕೌಲಾಲಂಪುರದಿಂದ ಕೊಚ್ಚಿಗೆ ಹೊರಟಿತ್ತು. ರಾತ್ರಿ 9.30 ರಿಂದ 11.05ರ ನಡುವೆ ವಿಮಾನ ಗಗನದಲ್ಲಿದ್ದಾಗ ಆರೋಪಿ ತುರ್ತು ನಿರ್ಗಮನ ದ್ವಾರವನ್ನು ಬಲವಂತವಾಗಿ ತೆರೆಯಲು ಯತ್ನಿಸಿದ್ದಾನೆ. ಈ ವೇಳೆ ನಿರ್ಗಮನ ದ್ವಾರದ ಕಿಟಕಿಯ ಪ್ಯಾನೆಲ್ಗೂ ಹಾನಿಯಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಯಾಣಿಕನ ಈ ಕೃತ್ಯವನ್ನು ಗಮನಿಸಿದ ವಿಮಾನದ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಕೂಡಲೇ ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದಾರೆ. ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ದೃಶ್ಯಗಳು ಕಾಣಿಸಿಕೊಂಡಿವೆ.
ಬಟಿಕ್ ಏರ್ನ ಭದ್ರತಾ ವಿಭಾಗದ ಅಧಿಕಾರಿಯ ದೂರಿನ ಆಧಾರದ ಮೇಲೆ ಕೊಚ್ಚಿಯ ನೆಡುಂಬಾಶೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಮಾನ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಸಿಐಎಸ್ಎಫ್ (CISF) ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 351(3) ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ, Aircraft Act ಸೆಕ್ಷನ್ 11A ಅಡಿಯಲ್ಲಿ ವಿಮಾನ ಸುರಕ್ಷತಾ ನಿಯಮ ಉಲ್ಲಂಘನೆ ಹಾಗೂ ಕೇರಳ ಪೊಲೀಸ್ ಕಾಯ್ದೆ ಸೆಕ್ಷನ್ 118(e) ಅಡಿಯಲ್ಲಿ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ವಿಮಾನ ಸುರಕ್ಷತೆಯನ್ನು ಅಪಾಯಕ್ಕೆ ದೂಡುವ ಇಂತಹ ಕೃತ್ಯಗಳು ಗಂಭೀರ ಅಪರಾಧವಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.