ರಾಜ್ಯ
ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದ ಯಲ್ಲಮ್ಮನ ಗುಡ್ಡ ಜಲಾವೃತ – ಭಕ್ತರು ಪರದಾಟ
ಬೆಳಗಾವಿ: ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಸಾಕಷ್ಟು ಅವಾಂತರಗಳು ಉಂಟಾಗಿವೆ. ಜಲಾವೃತಗೊಂಡ ರಸ್ತೆಗಳ ಕಾರಣದಿಂದ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಭಕ್ತರು ಪರದಾಡುವ ಪರಿಸ್ಥಿತಿ ಎದುರಾಗಿದೆ. ನಿರಂತರ ಮಳೆಯಿಂದಾಗಿ ಯಲ್ಲಮ್ಮನ ಗುಡ್ಡದ ಸುತ್ತಮುತ್ತ ಸಹ್ಯಾದ್ರಿ ಮತ್ತು ಕೊಡಚಾದ್ರಿಯಂತಹ ನೈಸರ್ಗಿಕ ಸೌಂದರ್ಯವು ರೂಪುಗೊಂಡಿದ್ದು, ಪ್ರವಾಸಿಗರ ಮನಸೆಳೆಯುತ್ತಿದೆ.
ಉಗರಗೋಳದಲ್ಲಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಭಕ್ತರು ದೇವಿಯ ದರ್ಶನವಿಲ್ಲದೆ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗಿದೆ. ನೂಲಹುಣ್ಣಿಮೆ ಹಿನ್ನೆಲೆಯಲ್ಲಿ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಜಾತ್ರೆ ಪ್ರಾರಂಭವಾಗಿದ್ದು, ಮಹಾರಾಷ್ಟ್ರ, ಗೋವಾ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ.
ಮಳೆಯಿಂದ ಎಣ್ಣೆ ಹೊಂಡ ಜಲಾವೃತಗೊಂಡಿದ್ದು, ಭಕ್ತರ ಸುರಕ್ಷತೆಗೆ ಸವಾಲು ಎದುರಾಗಿದೆ. ಸವದತ್ತಿ ತಾಲೂಕಿನ ಬೆಟ್ಟ-ಬಂಡೆಗಳ ಮೇಲೆ ಸಣ್ಣ ಜಲಪಾತಗಳು ಸೃಷ್ಟಿಯಾಗಿ ಕಣ್ಮನ ಸೆಳೆಯುತ್ತಿವೆ. ಭಾರೀ ಮಳೆಯಿಂದ ದೇವಸ್ಥಾನದ ಕೌಂಟರ್, ಗರ್ಭಗುಡಿ ಸೇರಿದಂತೆ ಸುತ್ತಮುತ್ತ ಮಳೆನೀರು ನುಗ್ಗಿದೆ.
ರಾಮದುರ್ಗ ತಾಲೂಕಿನ ಕಿಲ್ಲಾತೋರಗಲ್ ಬಳಿ ಗುಡ್ಡ ಕುಸಿತ ಸಂಭವಿಸಿದ್ದು, ಬೃಹತ್ ಕಲ್ಲುಬಂಡೆಗಳು ರಸ್ತೆಗೆ ಉರುಳಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ತಹಶಿಲ್ದಾರರ ಪ್ರಕಾರ, ಮಳೆಯಿಂದಾದ ಹಾನಿ ಮತ್ತು ಅನಾಹುತಗಳ ಪರಿಶೀಲನೆ ಮುಂದುವರಿದಿದೆ.