ಬಳ್ಳಾರಿ ಗಲಾಟೆ: ಸದನದಲ್ಲಿ ಜನಾರ್ದನ ರೆಡ್ಡಿ–ನಾಗೇಂದ್ರ ಮಾತಿನ ಯುದ್ಧ | Hosa Suddi

ದೇಶ

ಬಳ್ಳಾರಿ ಗಲಾಟೆ: ಸದನದಲ್ಲಿ ಜನಾರ್ದನ ರೆಡ್ಡಿ–ನಾಗೇಂದ್ರ ಮಾತಿನ ಯುದ್ಧ

Published

on

ಬೆಂಗಳೂರು: ಬಳ್ಳಾರಿ ಫೈರಿಂಗ್ ಹಾಗೂ ಬ್ಯಾನರ್ ಗಲಾಟೆ (Bellary Banner Riot) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಇಂದು ಭಾರೀ ಗದ್ದಲಕ್ಕೆ ಸಾಕ್ಷಿಯಾಯಿತು. ಶಾಸಕ ಬಿ. ನಾಗೇಂದ್ರ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ನಡುವೆ ಮಾತಿನ ಫೈರಿಂಗ್ ತೀವ್ರ ಸ್ವರೂಪ ಪಡೆದುಕೊಂಡಿತು.

ನಿನ್ನೆ ಸದನದಲ್ಲಿ ಮಾತನಾಡಿದ್ದ ಜನಾರ್ದನ ರೆಡ್ಡಿ, ಬಳ್ಳಾರಿ ಗಲಾಟೆಗೆ ನಾರಾ ಭರತ್ ರೆಡ್ಡಿ ಕಾರಣವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಗನ್‌ಮ್ಯಾನ್‌ಗಳು ಹೊಣೆ ಎಂದು ಆರೋಪಿಸಿದ್ದರು. ಜೊತೆಗೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಿ. ನಾಗೇಂದ್ರ, ಜನಾರ್ದನ ರೆಡ್ಡಿ ಸದನಕ್ಕೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬಿ. ನಾಗೇಂದ್ರ ಮಾತನಾಡಿ, ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಗಲಾಟೆಯಲ್ಲಿ ಬಿಜೆಪಿ ಕಾರ್ಯಕರ್ತರು ವಾಲ್ಮೀಕಿ ಫೋಟೋ ಇರುವ ಬ್ಯಾನರ್ ಕೆಳಗಿಳಿಸಿ ಅವಮಾನ ಮಾಡಿದ್ದಾರೆ. ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಯಾರು ಕಾರಣ ಎನ್ನುವುದು ತನಿಖೆಯಿಂದ ಹೊರಬರಲಿದೆ ಎಂದು ಹೇಳಿದರು. ನಂತರ ನಡೆದ ಬಿಜೆಪಿ ಸಮಾವೇಶದಲ್ಲಿ ಶ್ರೀರಾಮುಲು ನೀಡಿದ ಪ್ರಚೋದನಾತ್ಮಕ ಭಾಷಣದ ಉಲ್ಲೇಖವೂ ಸದನದಲ್ಲಿ ಪ್ರಸ್ತಾಪವಾಯಿತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜನಾರ್ದನ ರೆಡ್ಡಿ, ನಾಗೇಂದ್ರ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು. “ವಾಲ್ಮೀಕಿ ಸಮಾಜದಲ್ಲಿ ನೀನು ನಾಯಕನಾಗಲು ಸಾಧ್ಯವಿಲ್ಲ. ನಿಗಮದ ಹಣ ಲೂಟಿ ಮಾಡಿದವರಿಗೆ ವಾಲ್ಮೀಕಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ಬಿ. ನಾಗೇಂದ್ರ, ವಾಲ್ಮೀಕಿ ಸಮಾಜ ನನ್ನ ಜೊತೆಗಿದೆ ಎಂದು ಹೇಳಿ ಮೇಜು ಕುಟ್ಟಿ ಸವಾಲು ಹಾಕಿದರು. ಮಾತಿನ ಚಕಮಕಿ ತೀವ್ರವಾಗುತ್ತಿದ್ದಂತೆ ಸದನದಲ್ಲಿ ಗದ್ದಲ ಹೆಚ್ಚಾಯಿತು. ಪರಿಸ್ಥಿತಿ ನಿಯಂತ್ರಿಸಲು ಸ್ಪೀಕರ್ ಯು.ಟಿ. ಖಾದರ್ ಹರಸಾಹಸ ಪಡಬೇಕಾಯಿತು. ಜನಾರ್ದನ ರೆಡ್ಡಿಯನ್ನು ಶಾಂತಗೊಳಿಸಲು ಸುನೀಲ್ ಕುಮಾರ್ ಮೂಲಕ ಮನವಿ ಮಾಡಿದ ಪ್ರಸಂಗವೂ ನಡೆಯಿತು.

Trending

Exit mobile version