ಪೋಷಕರ ಬೈಗುಳಕ್ಕೆ ಮನೆಬಿಟ್ಟು ಹೊರಟ ಅಕ್ಕ-ತಮ್ಮ | Hosa Suddi

ದೇಶ

ಪೋಷಕರ ಬೈಗುಳಕ್ಕೆ ಮನೆಬಿಟ್ಟು ಹೊರಟ ಅಕ್ಕ-ತಮ್ಮ

Published

on

ಬೆಂಗಳೂರು: ದುಡಿಯುವ ಹಾಗೂ ಬಡ ಮಹಿಳೆಯರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆ ಇದೀಗ ಒಂದು ಕುಟುಂಬವನ್ನು ಕಂಗಾಲು ಮಾಡಿರುವ ಅಚ್ಚರಿಯ ಘಟನೆಯೊಂದಕ್ಕೆ ಕಾರಣವಾಗಿದೆ. ಟ್ಯೂಷನ್‌ಗೆ ಹೋಗಲಿಲ್ಲ ಎಂದು ಪೋಷಕರು ಬೈದ ಕಾರಣ 13 ವರ್ಷದ ಬಾಲಕಿ ತನ್ನ 9 ವರ್ಷದ ತಮ್ಮನೊಂದಿಗೆ ಮನೆಬಿಟ್ಟು ಹೊರಟು, ಫ್ರೀ ಬಸ್‌ನಲ್ಲಿ ಊರೂರು ಸುತ್ತಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಾರತ್ತಹಳ್ಳಿ ಸಮೀಪದ ಅಶ್ವತ್ಥನಗರ ನಿವಾಸಿಯಾದ ಅಕ್ಕ-ತಮ್ಮ, ಮನೆಬಿಟ್ಟು ಹೊರಟು ಮೊದಲು ಮೆಜೆಸ್ಟಿಕ್‌ಗೆ ತಲುಪಿ ಅಲ್ಲಿಂದ ಶಿವಮೊಗ್ಗ ಮತ್ತು ಚಿತ್ರದುರ್ಗದವರೆಗೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಬಾಲಕಿಗೆ ಆಧಾರ್ ಕಾರ್ಡ್ ಇದ್ದ ಕಾರಣ ಮಹಿಳೆಯರ ಉಚಿತ ಬಸ್ ಯೋಜನೆಯಡಿ ಪ್ರಯಾಣಿಸಿದ್ದರೆ, ತಮ್ಮನಿಗೆ ಟಿಕೆಟ್ ಮಾಡಿಸದೇ ಕರೆದುಕೊಂಡು ಹೋಗಿದ್ದಾಳೆ.

ಮಕ್ಕಳು ಕಾಣೆಯಾಗಿರುವುದರಿಂದ ಆತಂಕಗೊಂಡ ಪೋಷಕರು ತಕ್ಷಣ HAL ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ರಾಜ್ಯಾದ್ಯಂತ ಅಲರ್ಟ್ ಘೋಷಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೋ ಹಾಗೂ ಮಾಹಿತಿ ಹಂಚಿಕೊಂಡರು.

ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಮಕ್ಕಳು ಅಶ್ವತ್ಥನಗರದಿಂದ ಬ್ಯಾಗ್ ಹಿಡಿದು ಹೊರಟು, ಮಾರತ್ತಹಳ್ಳಿ ಸ್ಕೈವಾಕ್ ಮೂಲಕ ಮೆಜೆಸ್ಟಿಕ್‌ಗೆ ತೆರಳಿರುವುದು ದೃಢಪಟ್ಟಿತು. ಅಲ್ಲಿಂದ ಬಸ್ ಹತ್ತಿ ಶಿವಮೊಗ್ಗ ಕಡೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಯಿತು.

ಇದರ ಮಧ್ಯೆ ಭದ್ರಾವತಿಯಲ್ಲಿ ಸಾರ್ವಜನಿಕರ ಗಮನಕ್ಕೆ ಬಂದ ಮಕ್ಕಳು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮಾಹಿತಿ ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯವನ್ನು ತಕ್ಷಣ HAL ಪೊಲೀಸರು ಭದ್ರಾವತಿ ಠಾಣೆಗೆ ರವಾನಿಸಿದ್ದು, ಪೊಲೀಸರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಪೊಲೀಸರ ಸಂಯುಕ್ತ ಕಾರ್ಯಾಚರಣೆಯಿಂದ ಮನೆಬಿಟ್ಟು ಹೊರಟ ಅಕ್ಕ-ತಮ್ಮ ಕೊನೆಗೂ ಹೆತ್ತವರ ಮಡಿಲು ಸೇರಿದ್ದಾರೆ. ಈ ಘಟನೆ ಪೋಷಕರಿಗೆ ಮಕ್ಕಳೊಂದಿಗೆ ಸಂವಹನದ ಅಗತ್ಯವನ್ನೂ, ಮಕ್ಕಳ ಭದ್ರತೆ ಕುರಿತು ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವನ್ನೂ ಮತ್ತೆ ನೆನಪಿಸಿದೆ.

Trending

Exit mobile version