ಬೆಂಗಳೂರು
ಬೆಂಗಳೂರು ಟ್ರಾಫಿಕ್: ರೇಸ್ಕೋರ್ಸ್ ರಸ್ತೆಯಲ್ಲಿ 60 ದಿನ ಸಂಚಾರ ನಿಷೇಧ, ಪರ್ಯಾಯ ಮಾರ್ಗಗಳಿವು
ಬೆಂಗಳೂರು: ನಗರದ ವಾಹನ ಸವಾರರಿಗೆ ಮಹತ್ವದ ಮಾಹಿತಿ. ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿ ಮಳೆ ನೀರು ಕಾಲುವೆ, ಒಳಚರಂಡಿ ಹಾಗೂ ಇತರ ಉಪಯುಕ್ತ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಇಂದಿನಿಂದ 60 ದಿನಗಳ ಕಾಲ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. 2026ರ ಅಕ್ಟೋಬರ್ 5ರಿಂದ ಮುಂದಿನ 60 ದಿನಗಳವರೆಗೆ ಈ ಸಂಚಾರ ಬದಲಾವಣೆ ಜಾರಿಯಲ್ಲಿರಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
Race Course Road Bengaluru
R
ಬೆಂಗಳೂರು ನಗರದ ಹೈಗೌಂಡ್ಸ್ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ರೇಸ್ಕೋರ್ಸ್ ರಸ್ತೆಯ ಮೌರ್ಯ ಜಂಕ್ಷನ್ನಿಂದ ಹರೇ ಕೃಷ್ಣ ರಸ್ತೆ ಜಂಕ್ಷನ್ವರೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಇದರ ಮುಂದುವರಿದ ಭಾಗವಾಗಿ ರಸ್ತೆಯಲ್ಲಿ ಹೊಸದಾಗಿ ಮಳೆ ನೀರು ಕಾಲುವೆ, ಒಳಚರಂಡಿ ಮಾರ್ಗ ಹಾಗೂ ವಿವಿಧ ಉಪಯುಕ್ತ ಸೇವೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ಕಾಮಗಾರಿಯ ಹಿನ್ನೆಲೆಯಲ್ಲಿ ರೇಸ್ಕೋರ್ಸ್ ರಸ್ತೆಯ ಟ್ರೈಲ್ಯಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ಹಾಗೂ ಶಿವಾನಂದ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಾಮಗಾರಿ ನಡೆಯುವ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗಗಳನ್ನು ಸಹ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ?
ಶಿವಾನಂದ ಜಂಕ್ಷನ್ ಕಡೆಯಿಂದ ಮೌರ್ಯ ಜಂಕ್ಷನ್ ಕಡೆಗೆ ರೇಸ್ಕೋರ್ಸ್ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ ರೇಸ್ಕೋರ್ಸ್ ರಸ್ತೆಯ ಟ್ರೈಲ್ಯಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನೂ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಈ ಮಾರ್ಗವನ್ನು ಪ್ರತಿದಿನ ಬಳಸುವ ವಾಹನ ಸವಾರರು ಸಂಚಾರ ದಟ್ಟಣೆಯನ್ನು ತಪ್ಪಿಸಲು ಸೂಚಿಸಲಾದ ಪರ್ಯಾಯ ರಸ್ತೆಗಳನ್ನು ಬಳಸಬೇಕಾಗಿದೆ. ಪ್ರಮುಖವಾಗಿ ಬಸ್ಗಳು, ಭಾರಿ ಸರಕು ವಾಹನಗಳು ಹಾಗೂ ಇತರ ವಾಹನಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಸೂಚಿಸಲಾಗಿದೆ.
ಕೆ.ಆರ್. ಮಾರ್ಕೆಟ್ ಕಡೆಗೆ ಹೋಗುವವರಿಗೆ ಪರ್ಯಾಯ ಮಾರ್ಗ
ಶ್ಯಾಂಕಿ ರಸ್ತೆಯಿಂದ ಕೆ.ಆರ್. ಮಾರ್ಕೆಟ್ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್ಗಳು, ಖಾಸಗಿ ಬಸ್ಗಳು ಹಾಗೂ ಭಾರಿ ಸರಕು ವಾಹನಗಳು ವಿಂಡ್ಲರ್ ಮ್ಯಾನರ್ನಿಂದ ನೇರವಾಗಿ ಎಲ್ಆರ್ಡಿಇ ಜಂಕ್ಷನ್ ಕಡೆಗೆ ತೆರಳಬೇಕು. ಅಲ್ಲಿಂದ ಬಲ ತಿರುವು ಪಡೆದು ಬಸವೇಶ್ವರ ಜಂಕ್ಷನ್ ಮೂಲಕ ತಮ್ಮ ಗಮ್ಯಸ್ಥಾನ ತಲುಪಬಹುದಾಗಿದೆ.
ಇದರಿಂದ ರೇಸ್ಕೋರ್ಸ್ ರಸ್ತೆಯ ನಿರ್ಬಂಧಿತ ಭಾಗವನ್ನು ತಪ್ಪಿಸಿ ಕೆ.ಆರ್. ಮಾರ್ಕೆಟ್ ಕಡೆಗೆ ಸಂಚರಿಸಲು ಸಾಧ್ಯವಾಗಲಿದೆ.
ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳಿಗೆ ಮಾರ್ಗ ಬದಲಾವಣೆ
ಶ್ಯಾಂಕಿ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ತೆರಳುವ ಬಿಎಂಟಿಸಿ ಬಸ್ಗಳು, ಖಾಸಗಿ ಬಸ್ಗಳು, ಭಾರಿ ಸರಕು ವಾಹನಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳು ಕುಮಾರಕೃಪ ರಸ್ತೆಯ ಮೂಲಕ ಶಿವಾನಂದ ವೃತ್ತವನ್ನು ತಲುಪಬೇಕು. ಅಲ್ಲಿಂದ ಬಲ ತಿರುವು ಪಡೆದು ಎಸ್.ಸಿ. ರಸ್ತೆಯಲ್ಲಿ ಎಡ ತಿರುವು ಪಡೆದು ಮೆಜೆಸ್ಟಿಕ್ ಕಡೆಗೆ ಸಂಚರಿಸಬಹುದಾಗಿದೆ.
ಟ್ರೈಲ್ಯಟ್ ಜಂಕ್ಷನ್ ಕಡೆಗೆ ಹೋಗುವವರಿಗೆ ಸೂಚನೆ
ಓಲ್ಡ್ ಜೆಡಿಎಸ್ ಜಂಕ್ಷನ್ನಿಂದ ಟ್ರೈಲ್ಯಟ್ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಓಲ್ಡ್ ಜೆಡಿಎಸ್ ಜಂಕ್ಷನ್ನಲ್ಲಿ ಎಡಭಾಗದ ರಸ್ತೆಯನ್ನು ಬಳಸಬೇಕು. ಬಳಿಕ ಟ್ರೈಲ್ಯಟ್ ಜಂಕ್ಷನ್ ಕಡೆಗೆ ತೆರಳಿ ರೇವ್ಯೂ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಕುಮಾರಕೃಪ ರಸ್ತೆಯ ಮೂಲಕ ಶಿವಾನಂದ ಜಂಕ್ಷನ್ ಕಡೆಗೆ ಸಾಗಬಹುದಾಗಿದೆ.
ಇದೇ ವೇಳೆ ಟ್ರೈಲ್ಯಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ನೇರವಾಗಿ ಶಿವಾನಂದ ಮೇಲ್ಸೇತುವೆ ಮೂಲಕ ಸಂಚರಿಸಬೇಕು. ಬಳಿಕ ನೆಹರು ವೃತ್ತದಿಂದ ಎಸ್.ಸಿ. ರಸ್ತೆಯನ್ನು ತಲುಪಿ ಮೆಜೆಸ್ಟಿಕ್ ಕಡೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ.
60 ದಿನಗಳ ಕಾಲ ಸಂಚಾರ ಬದಲಾವಣೆ
ರೇಸ್ಕೋರ್ಸ್ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಸಂಚಾರ ಪೊಲೀಸರು ಈ ಪರ್ಯಾಯ ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದಾರೆ. ಅಕ್ಟೋಬರ್ 5, 2026ರಿಂದ ಮುಂದಿನ 60 ದಿನಗಳವರೆಗೆ ಸಂಚಾರ ನಿರ್ಬಂಧ ಮತ್ತು ಪರ್ಯಾಯ ಮಾರ್ಗಗಳು ಜಾರಿಯಲ್ಲಿರಲಿವೆ.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ತಮ್ಮ ಪ್ರಯಾಣದ ಸಮಯವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವುದು ಉತ್ತಮ. ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸಂಚಾರ ಪೊಲೀಸರಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ರೇಸ್ಕೋರ್ಸ್ ರಸ್ತೆ, ಶಿವಾನಂದ ಜಂಕ್ಷನ್, ಮೌರ್ಯ ಜಂಕ್ಷನ್, ಟ್ರೈಲ್ಯಟ್ ಜಂಕ್ಷನ್ ಹಾಗೂ ಮೆಜೆಸ್ಟಿಕ್ ಮಾರ್ಗದಲ್ಲಿ ಪ್ರತಿದಿನ ಸಂಚರಿಸುವವರು ಈ ಸಂಚಾರ ಬದಲಾವಣೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.
Also Read :https://hosasuddi.in/supreme-court-traffic-challan-electricity-bill/