ದೇಶ
ಕಾಡಿನಲ್ಲಿ ನಾಪತ್ತೆಯಾಗಿದ್ದ ‘ಭೀಮ’ ಮತ್ತೆ ಪ್ರತ್ಯಕ್ಷ – ಹಾಸನದ ಗ್ರಾಮಸ್ಥರಲ್ಲಿ ಆತಂಕ
ಹಾಸನ: ಒಂದು ಕಾಲದಲ್ಲಿ ದೈತ್ಯಾಕಾರದ ದೇಹದಿಂದ ಜನರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ‘ಭೀಮ’, ಮತ್ತೆ ಜನರ ಗಮನ ಸೆಳೆದಿದ್ದಾನೆ. ನವೆಂಬರ್ 9ರಂದು ಬೇಲೂರು ತಾಲೂಕಿನ ಜಗಬೋರನಹಳ್ಳಿ ಗ್ರಾಮದಲ್ಲಿ ನಡೆದ ಕಾಡಾನೆಗಳಾದ ಭೀಮ ಮತ್ತು ಕ್ಯಾಪ್ಟನ್ ನಡುವಿನ ರೋಮಾಂಚಕ ಕಾಳಗದಲ್ಲಿ ಭೀಮ ಒಂದು ದಂತ ಕಳೆದುಕೊಂಡು ನಾಪತ್ತೆಯಾಗಿದ್ದ.
ಅದಾದ ಬಳಿಕ ಭೀಮನ ಆರೋಗ್ಯದ ಬಗ್ಗೆ ಅರಣ್ಯ ಇಲಾಖೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಮಂಗಳವಾರ ಬೆಳಿಗ್ಗೆ ಚಲ್ಲೇನಹಳ್ಳಿ ಕಾಫಿತೋಟದಲ್ಲಿ ಭೀಮ ಮತ್ತೆ ಕಾಣಿಸಿಕೊಂಡಿದ್ದಾನೆ. ಕಾಫಿತೋಟದೊಳಗೆ ಸಂಚರಿಸುತ್ತಿದ್ದ ಭೀಮನ ದೃಶ್ಯವನ್ನು ಕಂಡ ಗ್ರಾಮಸ್ಥರು ಆತಂಕಗೊಂಡು ತಮ್ಮ ಮನೆಗಳ ಬಾಗಿಲು ಮುಚ್ಚಿಕೊಂಡಿದ್ದಾರೆ.
ಕಾಡಾನೆ ಮತ್ತು ಮಾನವ ಸಂಘರ್ಷ ಹಾಸನ ಪ್ರದೇಶದಲ್ಲಿ ಹೊಸದೇನಲ್ಲ. ಕಳೆದ ಐದು ದಶಕಗಳಿಂದಲೂ ಈ ಪ್ರದೇಶವು ಆನೆಗಳ ದಾಳಿ, ಹಾನಿ ಹಾಗೂ ಆತಂಕಕ್ಕೆ ಹೆಸರುವಾಸಿಯಾಗಿದೆ. ಕಳೆದ ವಾರವೂ ಭೀಮ ಬಿಕ್ಕೋಡು ಹೋಬಳಿಯ ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಸಂಚರಿಸುತ್ತಿದ್ದ. ಭಾನುವಾರ ಕ್ಯಾಪ್ಟನ್ ಹೆಸರಿನ ಮತ್ತೊಂದು ಆನೆಯೊಂದಿಗೆ ಓಡಾಡುತ್ತಿದ್ದಾಗ ನಡೆದ ಕಾಳಗದಲ್ಲಿ ಭೀಮ ಗಂಭೀರವಾಗಿ ಗಾಯಗೊಂಡಿದ್ದ.
2023ರ ಆಗಸ್ಟ್‌ನಲ್ಲಿ ಬೆನ್ನಿನ ಕೆಳಭಾಗದಲ್ಲಿ ಗಾಯಗೊಂಡಿದ್ದ ಭೀಮನಿಗೆ ಅರಣ್ಯ ಇಲಾಖೆ ವೈದ್ಯರು ಚಿಕಿತ್ಸೆ ನೀಡಿದ್ದರೂ, ನಂತರ ಆನೆ ಮದವೇರಿದ ಸಂದರ್ಭ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ಮಾಡಿ ಕೊಂದಿತ್ತು ಎಂಬ ಘಟನೆ ನೆನಪಿಗೆ ಬರುತ್ತದೆ.
ಸದ್ಯ ಭೀಮ ಕಾಫಿತೋಟದೊಳಗೆ ದಂತ ಮುರಿದು ನರಳಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅವನ ಚಲನವಲನವನ್ನು ನಿಗಾವಹಿಸುತ್ತಿದ್ದಾರೆ. ಗ್ರಾಮಸ್ಥರಿಗೆ ಆತಂಕ ಮೂಡದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಹಾಸನ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು “ಭೀಮ ಮತ್ತೆ ಬಂದು ದಾಂಧಲೆ ನಡೆಸಬಹುದು” ಎಂಬ ಭೀತಿಯಿಂದ ದಿನ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಹಿಂತಿರುಗಿಸಲು ಪ್ರಯತ್ನಿಸುತ್ತಿದ್ದಾರೆ.