ರಾಜ್ಯ
‘ದೆಹಲಿಗೆ ಹಣ ಕೊಡಲು ಬಿಡದಿ ಬೇಕಾ?’ ಕೇಂದ್ರ ಸಚಿವ H.D. Kumaraswamy
ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ. “ದೆಹಲಿಗೆ ಹಣ ಕೊಡಲು ಬಿಡದಿ ಟೌನ್‌ಶಿಪ್ ಯೋಜನೆ ಬೇಕಾ?” ಎಂದು ಪ್ರಶ್ನಿಸಿರುವ ಅವರು, ರೈತರ ಹಿತಕ್ಕಾಗಿ ಜೆಡಿಎಸ್ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಬಿಜೆಪಿ-ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಭೈರಮಂಗಲ ಗ್ರಾಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಕಳೆದ 515 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಯಾವುದೇ ಬೆದರಿಕೆಗೂ ಬಗ್ಗದೆ ರೈತರು ತಮ್ಮ ಹೋರಾಟ ಮುಂದುವರಿಸಿದ್ದಾರೆ ಎಂದರು.
“ನಮ್ಮ ಪಾದಯಾತ್ರೆ ರೈತರ ಹಿತಕ್ಕಾಗಿ ನಡೆಯುತ್ತಿದೆಯೇ ಹೊರತು ರಾಜಕೀಯ ಸ್ವಾರ್ಥಕ್ಕಾಗಿ ಅಲ್ಲ” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
‘ರೈತರ ಜಮೀನು ವಶಪಡಿಸಿಕೊಳ್ಳುವ ಪ್ರಯತ್ನ’
ಬಿಡದಿ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ ಕುಮಾರಸ್ವಾಮಿ, 2006ರಲ್ಲಿ ಯೋಜನೆ ಆರಂಭವಾದಾಗ ಇದ್ದ ನಿರ್ಧಾರವೇ ಬೇರೆ ಆಗಿತ್ತು ಎಂದರು. ತಮ್ಮ ಅವಧಿಯಲ್ಲಾಗಲಿ ಅಥವಾ ಬಿಜೆಪಿ ಸರ್ಕಾರದ ಅವಧಿಯಲ್ಲಾಗಲಿ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿರಲಿಲ್ಲ ಎಂದು ಹೇಳಿದರು.
ರೈತರ ಜಮೀನಿಗೆ ಮೊದಲು ₹2 ಕೋಟಿ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದವರು ಈಗ ₹3 ಕೋಟಿ ನೀಡುವುದಾಗಿ ಹೇಳುತ್ತಿದ್ದಾರೆ. “ಏನು ವ್ಯಾಪಾರ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದ ಅವರು, ಪೊಲೀಸ್ ಬಲ ಬಳಸಿ ರೈತರ ಜಮೀನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
2006ರಲ್ಲಿ 2,600 ಎಕರೆ ಸರ್ಕಾರಿ ಜಮೀನು ಇತ್ತು. ಅದು ಈಗ ಎಲ್ಲಿಗೆ ಹೋಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದರು.
‘ಸತ್ಯಶೋಧನಾ ಸಮಿತಿ ವರದಿ ಏನಾಯಿತು?’
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸಿರುವುದನ್ನೂ ಕುಮಾರಸ್ವಾಮಿ ಪ್ರಶ್ನಿಸಿದರು. 2006ರಲ್ಲಿಯೂ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಏನು ವರದಿ ನೀಡಿತ್ತು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಸಚಿವ ಎಚ್.ಸಿ. ಬಾಲಕೃಷ್ಣ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಅವರು ಜೆಡಿಎಸ್‌ನಲ್ಲಿ ಮೂರು ಬಾರಿ, ಬಿಜೆಪಿಯಲ್ಲಿ ಒಂದು ಬಾರಿ ಹಾಗೂ ಕಾಂಗ್ರೆಸ್‌ನಲ್ಲಿ ಒಂದು ಬಾರಿ ಗೆದ್ದಿದ್ದಾರೆ ಎಂದು ಟೀಕಿಸಿದರು.
ಯೋಜನೆಗೆ ಕೆಲ ದಲ್ಲಾಳಿಗಳು ಮಾತ್ರ ಒಪ್ಪಿಕೊಂಡು ಜಮೀನು ನೀಡುತ್ತಿದ್ದಾರೆ. ಆದರೆ ಪಿತ್ರಾರ್ಜಿತ ಆಸ್ತಿ ಹೊಂದಿರುವ ರೈತರು ಮತ್ತು ಸ್ವಾಭಿಮಾನಿ ರೈತ ಮಹಿಳೆಯರು ಯೋಜನೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ರೈತರು ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ನೈಸ್ ಟೋಲ್ ವಿಚಾರದಲ್ಲೂ ಸರ್ಕಾರಕ್ಕೆ ತರಾಟೆ
ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹಿಸುವ ವಿಚಾರದಲ್ಲಿಯೂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಹೈಕೋರ್ಟ್ ತೀರ್ಪನ್ನು ಅನುಸರಿಸಿ ಜನರು ಕಾನೂನುಬಾಹಿರವಾಗಿ ಟೋಲ್ ಹಣ ಪಾವತಿಸಬಾರದು ಎಂದು ಕರೆ ನೀಡಿದರು.
ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೋಲಾರ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ನ ಹಲವು ನಾಯಕರು, ಶಾಸಕರು ಹಾಗೂ ರೈತರು ಭಾಗವಹಿಸಿದ್ದರು.