ಬಿ 'ಹಾರ' ಯಾರಿಗೆ ? ಎಕ್ಸಿಟ್ ಪೋಲ್ ವಿಶ್ಲೇಷಣೆ | Hosa Suddi

ಚುನಾವಣೆ

ಬಿ ‘ಹಾರ’ ಯಾರಿಗೆ ? ಎಕ್ಸಿಟ್ ಪೋಲ್ ವಿಶ್ಲೇಷಣೆ

Published

on

ಪಟನಾ: ಬಿಹಾರ ವಿಧಾನಸಭೆ ಚುನಾವಣೆಯ 2ನೇ ಹಂತದ ಮತದಾನ ಮಂಗಳವಾರ ಯಶಸ್ವಿಯಾಗಿ ಮುಗಿದಿದ್ದು, ಇತಿಹಾಸದಲ್ಲೇ ಅತ್ಯಧಿಕವಾದ 67.14% ಮತದಾನ ದಾಖಲಾಗಿದೆ. ಒಟ್ಟು 243 ಸ್ಥಾನಗಳಲ್ಲಿ ಉಳಿದ 122 ಕ್ಷೇತ್ರಗಳಲ್ಲಿ ನಡೆದ ಈ ಹಂತದ ಮತದಾನವು ಶಾಂತಿಯುತವಾಗಿ ನಡೆದಿದ್ದು, ಹೆಚ್ಚಿನ ಮತದಾರರ ಭಾಗವಹಿಸುವಿಕೆ ಗಮನ ಸೆಳೆದಿದೆ.

ಮತದಾನ ಮುಗಿದ ಕೂಡಲೇ ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್‌ಗಳು) ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ (NDA) ಮೈತ್ರಿ ಮತ್ತೆ ಬಹುಮತದಿಂದ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಸೂಚಿಸಿವೆ. ಮತ್ತೊಂದೆಡೆ ಆರ್‌ಜೆಡಿ (RJD) ನೇತೃತ್ವದ ಮಹಾಗಠಬಂಧನ್‌ ವಿಪಕ್ಷ ಒಕ್ಕೂಟವು ಅಧಿಕಾರ ಹಸ್ತಾಂತರಿಸಲು ವಿಫಲವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ನೇತೃತ್ವದ ಜನಸುರಾಜ್ ಪಕ್ಷ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದರೂ, ಯಾವುದೇ ಸೀಟು ಗಳಿಸಲು ಸಾಧ್ಯವಾಗುವುದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ. ಮತಗಟ್ಟೆ ಸಮೀಕ್ಷೆ ನಡೆಸಿದ ಮಾಟ್ರಿಜ್, ಜೆವಿಸಿ, ಚಾಣಕ್ಯ ಸ್ಟ್ರಾಟಜೀಸ್, ಟಿಐಎಫ್ ರೀಸರ್ಚ್, ಪಿ.ಮಾರ್ಕ್, ಪೀಪಲ್ಸ್ ಇನ್‌ಸೈಟ್, ದೈನಿಕ ಭಾಸ್ಕರ್, ಡಿ.ವಿ. ರೀಸರ್ಚ್ ಮತ್ತು ಪೀಪಲ್ಸ್ ಪಲ್ಸ್ – ಈ 9 ಸಂಸ್ಥೆಗಳೂ ಎನ್‌ಡಿಎ ಮೈತ್ರಿಗೆ ಸ್ಪಷ್ಟ ಬಹುಮತ ಸೂಚಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ನಿತೀಶ್‌ಕುಮಾರ್‌ಗೆ ಪ್ಲಸ್ ಪಾಯಿಂಟ್: ಕಳೆದ ಚುನಾವಣೆಯಲ್ಲಿ ಜೆಡಿಯು (JD-U) ಪಕ್ಷವು 25 ಸ್ಥಾನ ಕಳೆದುಕೊಂಡು ಕೇವಲ 43 ಸ್ಥಾನಗಳಿಗೆ ಸೀಮಿತವಾಗಿತ್ತು. ಇದಕ್ಕೆ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದ ಬಂಡಾಯ ಪ್ರಮುಖ ಕಾರಣವಾಗಿತ್ತು. ಆದರೆ ಈ ಬಾರಿ ಪಾಸ್ವಾನ್ ಅವರ ಪಕ್ಷವು ಎನ್‌ಡಿಎ ಜೊತೆ ಸೇರಿಕೊಂಡಿರುವುದರಿಂದ ನಿತೀಶ್‌ಕುಮಾರ್‌ಗೆ ಇದು ಪ್ಲಸ್ ಪಾಯಿಂಟ್ ಆಗಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಮತದಾರರ ಉತ್ಸಾಹ ಹಾಗೂ ದಾಖಲೆ ಪ್ರಮಾಣದ ಮತದಾನವು ಬಿಹಾರ ರಾಜಕೀಯದಲ್ಲಿ ಹೊಸ ಚಲನೆಯನ್ನು ತಂದಿದೆ. ಅಂತಿಮ ಫಲಿತಾಂಶಗಳು ಮುಂದಿನ ರಾಜಕೀಯ ಚಿತ್ರಣವನ್ನು ನಿರ್ಧರಿಸಲಿವೆ ಎಂಬುದು ಸ್ಪಷ್ಟವಾಗಿದೆ.

Trending

Exit mobile version