ಚುನಾವಣೆ
ಬಿಹಾರ ಚುನಾವಣೆಗೆ ವಾದ್ರಾ ಕಿಡಿ: “ಮರುಚುನಾವಣೆ ಬೇಕು!”
ಇಂದೋರ್: ಬಿಹಾರ ಚುನಾವಣೆಯಲ್ಲಿ (Bihar Election) ಆಡಳಿತಾರೂಢ ಎನ್ಡಿಎ (NDA) ಭರ್ಜರಿ ಗೆಲುವು ಸಾಧಿಸಿದ ತಕ್ಷಣವೇ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ (Robert Vadra) ಬಿಹಾರದಲ್ಲಿ ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮಧ್ಯಪ್ರದೇಶಕ್ಕೆ ಎರಡು ದಿನಗಳ ಧಾರ್ಮಿಕ ಭೇಟಿಗೆ ಬಂದಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಬಿಹಾರದ ಜನರು ಫಲಿತಾಂಶದಿಂದ ಸಂತೋಷವಾಗಿಲ್ಲ. ಈ ಎಲ್ಲವೂ ಚುನಾವಣಾ ಆಯೋಗದ ಸಹಕಾರದಿಂದ ನಡೆದಂತಾಗಿದೆ” ಎಂದು ಆರೋಪಿಸಿದರು.
ರಾಹುಲ್ ಗಾಂಧಿ (Rahul Gandhi) ಶೀಘ್ರದಲ್ಲೇ ಜನರನ್ನು ಭೇಟಿಯಾಗಲಿದ್ದು, ಯುವಕರು ಅವರೊಂದಿಗೆ ಕೈಜೋಡಿಸಲಿದ್ದಾರೆ. “ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಆಂದೋಲನ ಪ್ರಾರಂಭಿಸುತ್ತೇವೆ. ಬಿಹಾರದಲ್ಲಿ ಚುನಾವಣೆ ಸರಿಯಾಗಿ ನಡೆದಿಲ್ಲ” ಎಂದು ವಾದ್ರಾ ಹೇಳಿದರು.
“ದೇಶಕ್ಕೆ ಬದಲಾವಣೆಯ ಅಗತ್ಯವಿದೆ. ಸರ್ಕಾರ ಯಾವುದೇ ತಪ್ಪು ಮಾಡಿದರೂ, ಯುವಕರು ಅದನ್ನು ಒಪ್ಪುವುದಿಲ್ಲ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಹೋರಾಡುತ್ತೇವೆ” ಎಂದು ಅವರು ಹೋರಾಟದ ಸಂದೇಶ ನೀಡಿದರು.
ಬಿಹಾರದ 243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ 202 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ 89 ಹಾಗೂ ಜೆಡಿಯು 85 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್, ಆರ್ಜೆಡಿ ಹಾಗೂ ಇತರ ಪಕ್ಷಗಳ ಒಕ್ಕೂಟವಾದ ಮಹಾಘಟಬಂಧನ್ ಕೇವಲ 35 ಸ್ಥಾನಗಳಿಗೆ ಸೀಮಿತವಾಗಿದೆ.