ಬೆಂಗಳೂರು
DCM ಡಿಕೆ ಶಿವಕುಮಾರ್ ಯೋಜನೆಗೆ ಜನರ ನೀರಸ ಪ್ರತಿಕ್ರಿಯೆ – ಕಾರಣವೇನು?
ಬೆಂಗಳೂರು: ಬಿ ಖಾತಾದಾರರಿಗೆ ನಗರಾಭಿವೃದ್ಧಿ ಇಲಾಖೆ ಸುವರ್ಣಾವಕಾಶ ನೀಡಿದ್ದು — ಈಗ ಬಿ ಖಾತೆಯನ್ನು ಎ ಖಾತಾಕ್ಕೆ ಪರಿವರ್ತನೆ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಆದರೆ, ಈ ಯೋಜನೆಗೆ ಬೆಂಗಳೂರಿಗರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗುತ್ತಿಲ್ಲ.
ಯೋಜನೆ ಜಾರಿಗೆ ಬಂದು 25 ದಿನಗಳಾದರೂ, ಕೇವಲ 1,200 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಸರ್ಕಾರ ನಿಗದಿಪಡಿಸಿರುವ 5% ಮಾರ್ಗಸೂಚಿ ದರವೇ ಜನರ ಆಸಕ್ತಿ ಕುಂಠಿತಗೊಳಿಸಿರುವುದಾಗಿ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (D.K. Shivakumar) ಈ ಯೋಜನೆ ಜಾರಿ ಮಾಡಿದ್ದರು. ಆದರೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇದನ್ನು ಟೀಕಿಸಿ, “ಯಾರು ಕೂಡ ದುಡ್ಡು ಕೊಟ್ಟು ಎ ಖಾತಾ ಮಾಡಿಸಿಕೊಳ್ಳಬೇಡಿ, ನಮ್ಮ ಸರ್ಕಾರ ಬಂದಮೇಲೆ ನೋಡ್ತೇವೆ” ಎಂದು ಹೇಳಿದ್ದರು. ಈ ಹೇಳಿಕೆಯಿಂದ ಜನರಲ್ಲಿ ಗೊಂದಲ ಉಂಟಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಇದೇ ವೇಳೆ ಬೆಂಗಳೂರು ಒನ್ ಕೇಂದ್ರಗಳು ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡದಿರುವುದೂ ಒಂದು ಕಾರಣವಾಗಿದೆ ಎಂದು ತಿಳಿದುಬಂದಿದೆ. ಜಿಬಿಎ (GBA) ಅಧಿಕಾರಿಗಳು ಈಗ ಜನ ಯಾಕೆ ಹಿಂದೆ ಸರಿಯುತ್ತಿದ್ದಾರೆ ಎಂಬುದರ ಕುರಿತು ವರದಿ ಸಿದ್ಧಪಡಿಸಲು ಮುಂದಾಗಿದ್ದಾರೆ.