ಶಕ್ತಿ ಯೋಜನೆ ದುರ್ಬಳಕೆ? BMTC ಬಸ್‌ನಲ್ಲಿ ಉಚಿತ ಟಿಕೆಟ್ ಹರಿದು ಬಿಸಾಡಿದ ಮಹಿಳೆ – ವಿಡಿಯೋ ವೈರಲ್ | Hosa Suddi

ಅಪರಾಧ

ಶಕ್ತಿ ಯೋಜನೆ ದುರ್ಬಳಕೆ? BMTC ಬಸ್‌ನಲ್ಲಿ ಉಚಿತ ಟಿಕೆಟ್ ಹರಿದು ಬಿಸಾಡಿದ ಮಹಿಳೆ – ವಿಡಿಯೋ ವೈರಲ್

Published

on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಲಕ್ಷಾಂತರ ಮಹಿಳೆಯರಿಗೆ ವರದಾನವಾಗಿದ್ದರೂ, ಕೆಲವರ ದುರ್ಬಳಕೆಯಿಂದಾಗಿ ಬಸ್ ಸಿಬ್ಬಂದಿಗೆ ತಲೆನೋವಾಗುತ್ತಿದೆ. ಇತ್ತೀಚೆಗೆ ಬಿಎಂಟಿಸಿ (BMTC) ಬಸ್‌ನಲ್ಲಿ ಮಹಿಳೆಯೊಬ್ಬಳು ಉಚಿತ ಟಿಕೆಟ್ ಹರಿದು ಬಿಸಾಡಿ, ಕಂಡಕ್ಟರ್ ಹಾಗೂ ಡ್ರೈವರ್ ಜೊತೆ ಉದ್ದಟವಾಗಿ ವರ್ತಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ರಾತ್ರಿ ಮೆಜೆಸ್ಟಿಕ್‌ನಿಂದ ದಾಬಾಸ್ ಪೇಟೆಗೆ ತೆರಳುತ್ತಿದ್ದ ಡಿಪೋ ನಂ.43ರ ಬಿಎಂಟಿಸಿ ಬಸ್‌ನಲ್ಲಿ ನಡೆದಿದೆ. ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದ ಮಹಿಳೆ, ಅದನ್ನು ಹರಿದು ಬಿಸಾಡಿ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾಳೆ. ಮಹಿಳೆಯ ವರ್ತನೆಯಿಂದ ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ಕೂಡಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಡೋಂಟ್ ಕೇರ್’ ಧೋರಣೆ, ಚೆಕಿಂಗ್ ಬರಲಿ ಎಂದ ಮಹಿಳೆ

ಟಿಕೆಟ್ ಹರಿದು ಬಿಸಾಡಿರುವುದನ್ನು ಗಮನಿಸಿದ ಕಂಡಕ್ಟರ್ ಪ್ರಶ್ನಿಸಿದಾಗ, ಮಹಿಳೆ “ಡೋಂಟ್ ಕೇರ್” ಎಂಬ ಧೋರಣೆಯಲ್ಲಿ ಉತ್ತರ ನೀಡಿ ಉದ್ದಟತನ ತೋರಿದ್ದಾರೆ. “ಚೆಕಿಂಗ್ ಅಧಿಕಾರಿಗಳು ಬರಲಿ, ಅವರ ಜೊತೆಗೆ ಮಾತನಾಡುತ್ತೇನೆ” ಎಂದು ಅಹಂಕಾರದಿಂದ ಮಾತನಾಡಿದ್ದಾಳೆ ಎಂದು ಬಸ್ ಸಿಬ್ಬಂದಿ ಆರೋಪಿಸಿದ್ದಾರೆ.

ಅರ್ಧ ಗಂಟೆ ಬಸ್ ನಿಲುಗಡೆ – ಪ್ರಯಾಣಿಕರಿಗೆ ತೊಂದರೆ

ಕಂಡಕ್ಟರ್ ಹಣ ನೀಡಿ ಮರು ಟಿಕೆಟ್ ಪಡೆಯುವಂತೆ ಸೂಚಿಸಿದರೂ ಮಹಿಳೆ ಅದನ್ನು ತಿರಸ್ಕರಿಸಿ ಬಸ್‌ನಲ್ಲೇ ಕುಳಿತುಕೊಂಡು ಪ್ರಯಾಣ ಮುಂದುವರಿಸಿದ್ದಾರೆ. ಈ ಕಾರಣದಿಂದ ಬಸ್ ಸುಮಾರು ಅರ್ಧ ಗಂಟೆ ಚಾಲನೆ ಇಲ್ಲದೆ ನಿಂತು, ಇತರ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಮಹಿಳೆಯ ಉದ್ದಟ ವರ್ತನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಶಕ್ತಿ ಯೋಜನೆಯ ದುರ್ಬಳಕೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಘಟನೆಗಳು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡುತ್ತಿವೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

Trending

Exit mobile version