ದೇಶ
BUDGET HIGHLIGHTS: ಸೆಮಿಕಂಡಕ್ಟರ್ ಮಿಷನ್‌ಗೆ ₹40,000 ಕೋಟಿ, ಅಪರೂಪದ ಭೂಮಿ ಕಾರಿಡಾರ್ ಘೋಷಣೆ
ನವದೆಹಲಿ, ಫೆಬ್ರವರಿ 1: ಇಂದು ದಾಖಲೆಯ 9ನೇ ಬಾರಿ ಕೇಂದ್ರ ಬಜೆಟ್ (Budget 2026) ಮಂಡಿಸಿದ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ, ಈ ವರ್ಷದ ಬಜೆಟ್‌ನ ಪ್ರಮುಖ ಅಂಶಗಳನ್ನು ವಿವರಿಸಿದರು. ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಬಜೆಟ್ ಹೆಚ್ಚಿನ ಒತ್ತು ನೀಡಿದ್ದು, ದೇಶದ ಆರ್ಥಿಕತೆಯನ್ನು ಸ್ವಾವಲಂಬಿ ದಿಕ್ಕಿನಲ್ಲಿ ಕರೆದೊಯ್ಯುವ ಗುರಿ ಹೊಂದಿದೆ ಎಂದು ಹೇಳಿದರು.
ಭಾರತದ ಸೆಮಿಕಂಡಕ್ಟರ್ ಮಿಷನ್‌ಗೆ ₹40,000 ಕೋಟಿ ರೂ. ಉತ್ತೇಜನ ಘೋಷಿಸಲಾಗಿದೆ. ಇದು ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವ ಜೊತೆಗೆ ಐಪಿ (IP) ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಎರಡು ಪ್ರಮುಖ ಘೋಷಣೆಗಳನ್ನು ಒಳಗೊಂಡಿದೆ. ₹40,000 ಕೋಟಿ ಮೊತ್ತದ ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಯೋಜನೆ ಭಾರತವನ್ನು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಸ್ವಾವಲಂಬಿಯಾಗಿಸಲು ನೆರವಾಗಲಿದೆ ಎಂದು ಸೀತಾರಾಮನ್ ತಿಳಿಸಿದರು.
ಇದೇ ವೇಳೆ, ಅಪರೂಪದ ಭೂಮಿ ಖನಿಜಗಳ (Rare Earth) ಕಾರಿಡಾರ್‌ಗಳ ಸ್ಥಾಪನೆ ಘೋಷಿಸಲಾಗಿದ್ದು, ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಇದರಿಂದ ಆಯಸ್ಕಾಂತಗಳು ಹಾಗೂ ಅಪರೂಪದ ಭೂಮಿ ಆಮದುಗಳ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ.
ಆರೋಗ್ಯ ಕ್ಷೇತ್ರದಲ್ಲೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಔಷಧಗಳು ಮತ್ತು ವಿಶೇಷ ವೈದ್ಯಕೀಯ ಆಹಾರಗಳ ಆಮದು ಸುಂಕ ವಿನಾಯಿತಿ ಪಟ್ಟಿಗೆ 7 ಹೆಚ್ಚುವರಿ ಅಪರೂಪದ ಕಾಯಿಲೆಗಳನ್ನು ಸೇರಿಸಲಾಗಿದೆ. ಜೊತೆಗೆ ಪ್ರಯಾಣಿಕರ ಬ್ಯಾಗೇಜ್ ಕ್ಲಿಯರೆನ್ಸ್ ಹಾಗೂ ವೈಯಕ್ತಿಕ ವಸ್ತುಗಳಿಗೆ ಹೆಚ್ಚುವರಿ ಸುಂಕ ರಹಿತ ಸೌಲಭ್ಯಗಳನ್ನು ನೀಡಲಾಗಿದೆ.
21ನೇ ಶತಮಾನವು ಸಂಪೂರ್ಣವಾಗಿ ತಂತ್ರಜ್ಞಾನದಿಂದ ನಡೆಸಲ್ಪಡಲಿದೆ. ಸಾಮಾನ್ಯ ಜನರಿಗೆ ನೈಜ ಪ್ರಯೋಜನ ಸಿಗುವಂತೆ ತಂತ್ರಜ್ಞಾನವನ್ನು ಜಾರಿಗೆ ತರುವುದೇ ಸರ್ಕಾರದ ಉದ್ದೇಶ ಎಂದು ಸೀತಾರಾಮನ್ ಹೇಳಿದರು. ಕಳೆದ 12 ವರ್ಷಗಳಲ್ಲಿ ದೇಶದ ಆರ್ಥಿಕತೆ ಸ್ಥಿರತೆ, ಹಣಕಾಸು ಶಿಸ್ತು ಮತ್ತು ನಿರಂತರ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ ಎಂದರು.