ಬೆಂಗಳೂರು

Parappana Agrahara ದಲ್ಲಿ ಸಿಸಿಬಿ ಆಪರೇಷನ್: 90ಕ್ಕೂ ಹೆಚ್ಚು ಸಿಬ್ಬಂದಿಯಿಂದ 7 ಗಂಟೆ ತಪಾಸಣೆ

Published

on

ಬೆಂಗಳೂರು: ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು Parappana Agrahara ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಸುಮಾರು 90ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿ-ಸಿಬ್ಬಂದಿ ನಡೆಸಿದ ತಪಾಸಣೆಯಲ್ಲಿ 10ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರಂಭವಾದ ಕಾರ್ಯಾಚರಣೆ ರಾತ್ರಿ 8 ಗಂಟೆಯವರೆಗೆ ಮುಂದುವರಿಯಿತು. ಸಿಸಿಬಿ ಡಿಸಿಪಿಗಳಾದ ಹರಿಬಾಬು ಹಾಗೂ ರಾಜಾ ಇಮಾಮ್ ಖಾಸಿಂ ನೇತೃತ್ವದಲ್ಲಿ ಜೈಲಿನ ವಿವಿಧ ಬ್ಯಾರಕ್‌ಗಳಲ್ಲಿ ತೀವ್ರ ತಪಾಸಣೆ ನಡೆಸಲಾಯಿತು.

ಸಿಸಿಬಿ ಮೂಲಗಳ ಪ್ರಕಾರ, ಕೆಲ ಬ್ಯಾರಕ್‌ಗಳಲ್ಲಿ ಅಡಗಿಸಿಟ್ಟಿದ್ದ 10ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ನಿಷೇಧಿತ ವಸ್ತುಗಳನ್ನು ಇಟ್ಟುಕೊಂಡಿರುವುದು ಕೂಡ ಪತ್ತೆಯಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚನೆಯಾದ ಬಳಿಕ ಜೈಲಿನಲ್ಲಿರುವ ಕೆಲ ರೌಡಿಗಳು ಹೊರಗಿರುವ ರೌಡಿಗಳೊಂದಿಗೆ ಸಂಪರ್ಕದಲ್ಲಿರುವ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳ ಪ್ರವೇಶ ತಡೆಯಲು ಜೈಲು ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ, ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳು ಜೈಲಿನೊಳಗೆ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಜೈಲಿನೊಳಗೆ ಮೊಬೈಲ್ ಫೋನ್‌ಗಳು, ಟಿವಿ ಹಾಗೂ ನೆಟ್‌ಫ್ಲಿಕ್ಸ್ ವೀಕ್ಷಣೆಯಂತಹ ಸೌಲಭ್ಯಗಳಿವೆ ಎಂದು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕೈದಿಗಳೇ ಚಿತ್ರೀಕರಿಸಿದ್ದಾರೆ ಎನ್ನಲಾಗಿತ್ತು.

ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತ ಜೈಲು ಅಧಿಕಾರಿಗಳು ಸಂಬಂಧಿತ ಬ್ಯಾರಕ್‌ಗಳಲ್ಲಿ ತೀವ್ರ ತಪಾಸಣೆ ನಡೆಸಿದ್ದರು. ಈ ವೇಳೆ ಬಾತ್‌ರೂಮ್‌ನ ನೀರಿನ ಪೈಪ್‌ನಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಅಡಗಿಸಿಟ್ಟಿದ್ದ ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದವು.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿತ್ತು. ಘಟನೆಯ ಬೆನ್ನಲ್ಲೇ ಜೈಲಿನ ಕರ್ತವ್ಯದಲ್ಲಿದ್ದ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದರು.

ಜೈಲಿನೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ?

ಜೈಲಿನಲ್ಲಿರುವ ವಿಚಾರಣಾ ಕೈದಿಗಳು ಹಾಗೂ ರೌಡಿಗಳು ಹೊರಗಿನ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಮೊಬೈಲ್‌ಗಳನ್ನು ಬಳಸುತ್ತಿರುವ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇದೀಗ ಸಿಸಿಬಿ ನಡೆಸಿರುವ ಬೃಹತ್ ತಪಾಸಣೆ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನದ ಭಾಗವಾಗಿದೆ ಎನ್ನಲಾಗಿದೆ.

ಪತ್ತೆಯಾಗಿರುವ ಮೊಬೈಲ್‌ಗಳು ಮತ್ತು ನಿಷೇಧಿತ ವಸ್ತುಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅವು ಜೈಲಿನೊಳಗೆ ಹೇಗೆ ಪ್ರವೇಶಿಸಿದವು ಹಾಗೂ ಅವುಗಳನ್ನು ಯಾರು ಬಳಸುತ್ತಿದ್ದರು ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Trending

Exit mobile version