ರಾಜ್ಯ
ಚಾಮರಾಜನಗರದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಶಾಸಕರಾದ ಪುಟ್ಟರಂಗಶೆಟ್ಟಿ ಹಾಗೂ ಸಚಿವ ವೆಂಕಟೇಶ್ ನಡುವೆ ಮಾತಿನ ಜಟಾಪಟಿ
ಚಾಮರಾಜನಗರ: ನಗರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಮನೆಮಾತಾಗಿರುವ ನಡುವೆಯೇ, ಈ ವಿಷಯದ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ವಿ. ವೆಂಕಟೇಶ್ ಹಾಗೂ ಶಾಸಕ ಪುಟ್ಟರಂಗಶೆಟ್ಟಿ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಕಾವೇರಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವ ವೆಂಕಟೇಶ್, “ನಿನ್ನ ಜವಾಬ್ದಾರಿ ಮಾಡಪ್ಪ” ಎಂದು ಶಾಸಕರತ್ತ ಬೊಟ್ಟು ಮಾಡಿದ ಕ್ಷಣದಲ್ಲಿ ಮಾತಿನ ಜಟಾಪಟಿಗೆ ವೇದಿಕೆ ಸಿಕ್ಕಿತು.
ಶಾಸಕ ಪುಟ್ಟರಂಗಶೆಟ್ಟಿ ಪ್ರತಿಯಾಗಿ, “ಡಿಸಿ ಬಳಿ ಪ್ರಾಕೃತಿಕ ವಿಕೋಪ ಅನುದಾನ ಇದೆ. ಪಟ್ಟಣ ಪ್ರದೇಶಕ್ಕೆ ಅನುದಾನ ನೀಡುವುದು ಅವರ ಜವಾಬ್ದಾರಿ,” ಎಂದು ತಿರುಗೇಟು ನೀಡಿದರು. ಇದಕ್ಕೆ ಸಚಿವರು, “ಜವಾಬ್ದಾರಿ ಡಿಸಿಯದ್ದೆ ಅಂತ ಒಪ್ಪಿಕೊಳ್ಳೋಣ,” ಎಂದು ಸಮಾಧಾನ ಪಡಿಸಲು ಯತ್ನಿಸಿದರು.
ಆದರೆ ಶಾಸಕ ಪುಟ್ಟರಂಗಶೆಟ್ಟಿ, “ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಇದ್ದರೆ ಡಿಸಿ ಹೇಗೆ ಜವಾಬ್ದಾರಿ?” ಎಂದು ಪ್ರಶ್ನಿಸಿದರು. “ಪ್ರಾಕೃತಿಕ ವಿಕೋಪ ಅನುದಾನ ಬಳಸಲು ಬರ ಘೋಷಣೆಯಾಗಬೇಕು. ಅದು ಬೇರೆ ಹಣ,” ಎಂದು ಸಚಿವರು ವಿವರ ನೀಡಿದರು.
“ಕುಡಿಯುವ ನೀರಿಗೆ ವಿಶೇಷ ಅನುದಾನ ಇದೆ,” ಎಂಬ ಶಾಸಕರ ಹೇಳಿಕೆಗೆ ಸಚಿವ ವೆಂಕಟೇಶ್, “ಇದ್ದರೆ ಕೊಡ್ಸೋಣ ಬಿಡಪ್ಪ,” ಎಂದು ತಮ್ಮ ನಿರೀಕ್ಷಿತ ಉತ್ತರ ನೀಡಿ ವಿಷಯ ಮುಕ್ತಾಯಗೊಳಿಸಿದರು.