ಸಿ.ಜೆ. ರಾಯ್ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಪಿಣರಾಯಿ ವಿಜಯನ್ ಆಗ್ರಹ | Hosa Suddi

ದೇಶ

ಸಿ.ಜೆ. ರಾಯ್ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಪಿಣರಾಯಿ ವಿಜಯನ್ ಆಗ್ರಹ

Published

on

ತಿರುವನಂತಪುರಂ: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್ (C.J. Roy) ಆತ್ಮಹತ್ಯೆ ಪ್ರಕರಣ ಇದೀಗ ಕೇರಳ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ (Judicial Enquiry) ನಡೆಸಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸಿ.ಜೆ. ರಾಯ್ ಅವರ ಸಾವು ನಾಗರಿಕ ಸಮಾಜ ಮತ್ತು ವ್ಯಾಪಾರ ವಲಯವನ್ನು ಆಘಾತಗೊಳಿಸಿದ್ದು, ಇದು ದೇಶದ ತೆರಿಗೆ ಆಡಳಿತದ ಮೇಲಿನ ಕಪ್ಪು ಚುಕ್ಕೆ ಎಂದು ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಪಾಲಿಸಬೇಕಾದ ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು ಪಾಲಿಸದೆ ವರ್ತಿಸಿದ್ದಾರೆ ಎಂಬ ವರದಿಗಳು ಆತಂಕಕಾರಿ ಎಂದು ಅವರು ಹೇಳಿದ್ದಾರೆ.

ಕಚೇರಿಯಲ್ಲಿ ಆದಾಯ ತೆರಿಗೆ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ರಾಯ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ಗಂಭೀರ ವಿಚಾರ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪರಿಶೀಲನೆ ನಡೆಯುತ್ತಿದ್ದಾಗ ರಾಯ್ ಮತ್ತೊಂದು ಕೋಣೆಗೆ ತೆರಳಿ, ತನ್ನ ಪರವಾನಗಿ ಪಡೆದ ಪಿಸ್ತೂಲ್ ಬಳಸಿ ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸತ್ಯವಾಗಿದ್ದರೆ, ಇದು ಐಟಿ ಅಧಿಕಾರಿಗಳಿಂದ ನಡೆದ ಗಂಭೀರ ಲೋಪವನ್ನು ಸೂಚಿಸುತ್ತದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. ಕನಿಷ್ಠ ಅಗತ್ಯದ ಮಾನವೀಯ ಶಿಷ್ಟಾಚಾರ ಹಾಗೂ ಕಾರ್ಯವಿಧಾನಗಳನ್ನು ಪಾಲಿಸದೇ ಇರುವುದರಿಂದ ಒಬ್ಬ ಉದ್ಯಮಿಯ ಅಮೂಲ್ಯ ಜೀವ ನಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಾದರೆ ನ್ಯಾಯಾಂಗ ತನಿಖೆ ಅತ್ಯಗತ್ಯ ಎಂದು ತಿಳಿಸಿರುವ ಮುಖ್ಯಮಂತ್ರಿ, ತೆರಿಗೆ ಅಧಿಕಾರಿಗಳ ಕಾರ್ಯವಿಧಾನಗಳ ಮೇಲೂ ಗಂಭೀರ ಪರಿಶೀಲನೆ ನಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಪ್ರಕರಣವು ದೇಶಾದ್ಯಂತ ಉದ್ಯಮಿಗಳು ಮತ್ತು ವ್ಯಾಪಾರ ಸಮುದಾಯದಲ್ಲಿ ಭಾರಿ ಆತಂಕ ಹುಟ್ಟುಹಾಕಿದೆ.

Trending

Exit mobile version