ಕಾಂಗ್ರೆಸ್ ಕೇವಲ ಪಕ್ಷವಲ್ಲ, ಅದು ಚಳುವಳಿ – ಸಿಎಂ ಸಿದ್ದರಾಮಯ್ಯ | Hosa Suddi

ದೇಶ

ಕಾಂಗ್ರೆಸ್ ಕೇವಲ ಪಕ್ಷವಲ್ಲ, ಅದು ಚಳುವಳಿ – ಸಿಎಂ ಸಿದ್ದರಾಮಯ್ಯ

Published

on

ಬೆಂಗಳೂರು: ಕಾಂಗ್ರೆಸ್ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ, ಅದು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಸಿದ್ಧಾಂತದ ಮೇಲೆ ನಿಂತಿರುವ ಚಳುವಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವತಿಯಿಂದ ಕ್ವೀನ್ಸ್ ರಸ್ತೆಯಲ್ಲಿರುವ ಭಾರತ್ ಜೋಡೋ ಭವನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, “ನಾವೆಲ್ಲರೂ ಒಂದು ಚಳುವಳಿಯ ಭಾಗ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬುದು ಕಾಂಗ್ರೆಸ್‌ನ ಮೂಲ ತತ್ವ” ಎಂದು ಹೇಳಿದರು.

ಜನವರಿ 5ರಿಂದ ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಿರಂತರ ಆಂದೋಲನ ನಡೆಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದ ಸಿಎಂ, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹೆಸರನ್ನು ಅಳಿಸಲು ನಡೆಯುತ್ತಿರುವ ಪ್ರಯತ್ನವನ್ನು ವಿಫಲಗೊಳಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಗ್ರಾಮೀಣ ಆರ್ಥಿಕತೆಯನ್ನು ಹಾಳು ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, MGNAREGA ಯೋಜನೆಯಡಿ ದಲಿತರು ಮತ್ತು ಹಿಂದುಳಿದವರಿಗೆ ಹೆಚ್ಚು ಉದ್ಯೋಗ ಸಿಗುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ 60% ಮತ್ತು ರಾಜ್ಯ ಸರ್ಕಾರ 40% ವೆಚ್ಚ ಭರಿಸಬೇಕು ಎಂದು ರಾಜ್ಯಗಳ ಮೇಲೆ ಭಾರಿ ಹೊರೆ ಹಾಕುತ್ತಿದೆ ಎಂದರು.

ಸ್ವಾತಂತ್ರ್ಯ ಹೋರಾಟದ ನಿಜವಾದ ವಾರಸುದಾರರು ಕಾಂಗ್ರೆಸ್ ಪಕ್ಷವೇ ಎಂದು ಹೇಳಿದ ಅವರು, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಪಕ್ಷವೇ ಕಾಂಗ್ರೆಸ್. ಜನಸಂಘ, RSS, ಬಿಜೆಪಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿಲ್ಲ ಎಂದು ಟೀಕಿಸಿದರು.

ದೇಶ ಮತ್ತು ಸಮಾಜವನ್ನು ಒಡೆಯುವುದೇ ಬಿಜೆಪಿಯ ಸಾಧನೆ ಎಂದು ಕಿಡಿಕಾರಿದ ಸಿಎಂ, ಆಧುನಿಕ ಭಾರತದ ರೂವಾರಿ ನೆಹರೂ, ಗರೀಬಿ ಹಠಾವೋ ಮೂಲಕ ಸಾಮಾಜಿಕ ನ್ಯಾಯ ನೀಡಿದ ಇಂದಿರಾ ಗಾಂಧಿ, 21ನೇ ಶತಮಾನಕ್ಕೆ ದಾರಿ ತೋರಿದ ರಾಜೀವ್ ಗಾಂಧಿ ಅವರ ಕೊಡುಗೆಗಳನ್ನು ಸ್ಮರಿಸಿದರು.

MGNAREGA ಯೋಜನೆಯ ಹೆಸರನ್ನು ಬದಲಾಯಿಸಿದರೂ ಮಹಾತ್ಮಾ ಗಾಂಧಿಯವರ ಹೆಸರು ಶಾಶ್ವತ. ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Trending

Exit mobile version