ಮೈಕ್ರೋಸಾಫ್ಟ್ ಹೆಸರಿನಲ್ಲಿ ಕಳ್ಳಾಟ: ಸಿಸಿಸಿ ತಂಡದ ಶ್ಲಾಘನೀಯ ಕಾರ್ಯಾಚರಣೆ | Hosa Suddi

ಅಪರಾಧ

ಮೈಕ್ರೋಸಾಫ್ಟ್ ಹೆಸರಿನಲ್ಲಿ ಕಳ್ಳಾಟ: ಸಿಸಿಸಿ ತಂಡದ ಶ್ಲಾಘನೀಯ ಕಾರ್ಯಾಚರಣೆ

Published

on

ಬೆಂಗಳೂರು: ಸೈಬರ್‌ ವಂಚನೆಗಳನ್ನು ತಡೆಗಟ್ಟಲು ಸಿಐಡಿ ಕಚೇರಿಯಲ್ಲಿ ಇತ್ತೀಚೆಗೆ ಪ್ರಾರಂಭಿಸಿದ ಸೈಬರ್‌ ಕಮಾಂಡ್‌ ಸೆಂಟರ್‌ (CCC) ಮತ್ತೊಂದು ಭರ್ಜರಿ ಸಾಧನೆ ಮಾಡಿದೆ. ಮೈಕ್ರೋಸಾಫ್ಟ್ ಹೆಸರನ್ನು ದುರುಪಯೋಗಪಡಿಸಿಕೊಂಡು ಅಮೆರಿಕಾ ಪ್ರಜೆಗಳು ಸೇರಿದಂತೆ ವಿದೇಶಿ ನಾಗರಿಕರನ್ನು ಆನ್‌ಲೈನ್ ಮೂಲಕ ಬೆದರಿಸಿ ವಂಚಿಸುತ್ತಿದ್ದ 21 ಸೈಬರ್‌ ಅಪರಾಧಿಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಪಿಎಸ್‌ಐ ವಂದನಾ ಕಲಗುಡಿ ನೀಡಿದ ದೂರಿನ ಆಧಾರದ ಮೇಲೆ ವೈಟ್‌ಫೀಲ್ಡ್‌ ಸೆನ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಆರೋಪಿಗಳು ಬಳಸುತ್ತಿದ್ದ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಹಾರ್ಡ್‌ಡಿಸ್ಕ್‌ಗಳು, ಮೊಬೈಲ್‌ಫೋನ್‌ಗಳು ಸೇರಿದಂತೆ ವಿವಿಧ ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ವೈಟ್‌ಫೀಲ್ಡ್‌ನ ವರ್ತೂರು-ಕೋಡಿ ಪ್ರದೇಶದಲ್ಲಿರುವ ಡೆಲ್ಟಾ ಬಿಲ್ಡಿಂಗ್‌ನ 6ನೇ ಮಹಡಿಯಲ್ಲಿ 4,500 ಚದರ ಅಡಿ ವಿಸ್ತೀರ್ಣದಲ್ಲಿ ‘ಮಸ್ಕ್‌ ಕಮ್ಯುನಿಕೇಶನ್‌’ ಎಂಬ ನಕಲಿ ಕಂಪನಿ ಕಳೆದ ಆಗಸ್ಟ್‌ನಲ್ಲಿ ಆರಂಭವಾಗಿತ್ತು. ಇಲ್ಲಿ ಬೇರೆ ರಾಜ್ಯದ ಯುವಕರನ್ನು ನೇಮಿಸಿಕೊಂಡು, ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಕಸ್ಟಮರ್‌ಗಳನ್ನು ಹೇಗೆ ಮೋಸಗೊಳಿಸುವುದು ಎಂಬುದಕ್ಕೆ ತರಬೇತಿ ನೀಡಲಾಗುತ್ತಿತ್ತು. ಆರೋಪಿಗಳು ಅಮೆರಿಕಾ ಪ್ರಜೆಗಳ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿ, ಅವರ ಖಾಸಗಿ ಮಾಹಿತಿಯನ್ನು ಪಡೆದು ‘ಮನಿ ಲಾಂಡರಿಂಗ್‌ ಪ್ರಕರಣ’ದ ಹೆಸರಿನಲ್ಲಿ ಡಿಜಿಟಲ್‌ ಅರೆಸ್ಟ್‌ ಮಾಡುವ ನಾಟಕವಾಡುತ್ತಿದ್ದರು.

ನ.14ರಂದು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ 21 ಮಂದಿ ಸ್ಥಳದಲ್ಲೇ ಸಿಕ್ಕಿಬಿದ್ದು ಬಂಧಿತರಾಗಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಜೋರಾಗಿದೆ. ಐಟಿ ಕಾಯಿದೆ ಸೆಕ್ಷನ್ 66, 66(C) ಮತ್ತು ಬಿಎನ್‌ಎಸ್‌ 318(4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆ ಡಿಜಿಪಿ ಡಾ. ಪ್ರಣವ್ ಮೊಹಂತಿ ಮಾರ್ಗದರ್ಶನದಲ್ಲಿ ಎಸ್.ಪಿ ಸವಿತಾ ಶ್ರೀನಿವಾಸ್, ಎಸಿಪಿ ಬಾಲಕೃಷ್ಣ, ಇನ್‌ಸ್ಪೆಕ್ಟರ್ ಕೆ. ಸುರೇಶ್ ಹಾಗೂ ಅವರ ತಂಡದಿಂದ ನಡೆದಿದ್ದು, ಬೆಳ್ಳಂಬೆಳಗ್ಗೆ ನಗರದ ಸೈಬರ್ ಭದ್ರತೆಗೆ ಬಲ ತುಂಬಿದೆ.

Trending

Exit mobile version