ಮಹಿಳೆಯರ ಮೇಲೆ ಅನಗತ್ಯ ಒತ್ತಡ: ರತ್ನ ದೀಪ ಜಿಲ್ಲಾಧಿಕಾರಿಗೆ ಮನವಿ | Hosa Suddi

ದೇಶ

ಮಹಿಳೆಯರ ಮೇಲೆ ಅನಗತ್ಯ ಒತ್ತಡ: ರತ್ನ ದೀಪ ಜಿಲ್ಲಾಧಿಕಾರಿಗೆ ಮನವಿ

Published

on

ದಾಂಡೇಲಿ: ಭಾರತೀಯ ಸಂವಿಧಾನವು ಮಹಿಳೆಯರಿಗೆ ಸಮಾನತೆ, ಸಮಾನ ಅವಕಾಶ ಮತ್ತು ಗೌರವಯುತ ಕೆಲಸದ ವಾತಾವರಣವನ್ನು ಭದ್ರಪಡಿಸಿದೆ. ಮಾತೃತ್ವದ ಸವಲತ್ತುಗಳ ಜೊತೆಗೆ ಸುರಕ್ಷಿತ ಕೆಲಸದ ಪರಿಸರ ಮಹಿಳೆಯರ ಹಕ್ಕು. ಆದರೆ ದಾಂಡೇಲಿ ಹಾಗೂ ಸುತ್ತಮುತ್ತಲಿನ ಅರಣ್ಯ ಹಾಗೂ ಇತರ ಸರ್ಕಾರಿ ಇಲಾಖೆಗಳಲ್ಲಿನ ಕೆಲವು ಕ್ರಮಗಳು ಈ ಸಂವಿಧಾನಿಕ ಭರವಸೆಗೆ ವಿರುದ್ಧವಾಗಿ ಹೊರಹೊಮ್ಮಿವೆ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷೆ ಹಾಗೂ ವಕೀಲೆ ರತ್ನ ದೀಪ ಎಂ.ಎನ್. ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಒತ್ತಾಯಿಸುವ ಅನಿಯಮಿತ ಕ್ರಮವನ್ನು ತಕ್ಷಣ ಸ್ಥಗಿತಗೊಳಿಸಲು ಆಗ್ರಹಿಸಿದ್ದಾರೆ.

ಅವರ ಪ್ರಕಾರ, ಅರಣ್ಯ ಇಲಾಖೆಯಲ್ಲಿ ಖಾಯಂ ಮತ್ತು ಖಾಯಂಮೇತರ ಮಹಿಳೆಯರ ಮೇಲೆ ಕೆಲ ಅಧಿಕಾರಿಗಳು ಅನಗತ್ಯ ಒತ್ತಡ ಹಾಕುತ್ತಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸುವ ಮೂಲಕ ಮಾನಸಿಕ ಒತ್ತಡಕ್ಕೆ ಗುರಿಯಾಗಿಸುತ್ತಿದ್ದಾರೆ. “ಮಹಿಳೆಯರನ್ನು ರಾತ್ರಿಯ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಾಯಿಸುವುದು ನೈತಿಕವಾಗಿಯೂ ತಪ್ಪಾಗಿದ್ದು ಮಹಿಳಾ ಸಬಲೀಕರಣ ನೀತಿಗೂ ವಿರುದ್ಧ,” ಎಂದು ರತ್ನ ದೀಪ ಹೇಳಿದ್ದಾರೆ.

ಕೆಳಹಂತದ ಮಹಿಳಾ ಸಿಬ್ಬಂದಿಯಿಂದ ಹೆಚ್ಚು ಕೆಲಸ ಮಾಡಿಸಿಕೊಂಡು, ತಾವು ಮಾತ್ರ ಕಛೇರಿಗೆ ಸರಿಯಾಗಿ ಬರದಿರುವ ಅಧಿಕಾರಿಗಳ ವರ್ತನೆ ಅಕ್ಷಮ್ಯ ಎಂದು ಅವರು ಟೀಕಿಸಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲ ಸರ್ಕಾರಿ ಕಚೇರಿಗಳಿಗೆ ಎಚ್ಚರಿಕಾ ಸೂಚನೆ ನೀಡುವಂತೆ ಅವರು ಜಿಲ್ಲಾಡಳಿತವನ್ನು ವಿನಂತಿಸಿದ್ದಾರೆ.

ಈ ಸಂಬಂಧ ರಾಜ್ಯ ಮಹಿಳಾ ಆಯೋಗಕ್ಕೂ ಮನವಿ ಸಲ್ಲಿಸಿರುವ ರತ್ನ ದೀಪ, “ಮಹಿಳೆಯರ ರಕ್ಷಣೆಗೆ ತಕ್ಷಣ ಹಸ್ತಕ್ಷೇಪ ಅಗತ್ಯ,” ಎಂದು ಆಗ್ರಹಿಸಿದ್ದಾರೆ.

Trending

Exit mobile version