ಅಪರಾಧ
ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್: ದರ್ಶನ್ ಅಭಿಮಾನಿಗಳಿಗೆ ಸಿಸಿಬಿ ಚಾರ್ಜ್‌ಶೀಟ್
ನಟಿ ರಮ್ಯಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಟಿಪ್ಪಣಿಗಳನ್ನು ಮಾಡಿದ ಆರೋಪಕ್ಕೆ ಸಂಬಂಧಿಸಿ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಬೆಂಗಳೂರು ಸಿಸಿಬಿ ಸೈಬರ್ ಪೊಲೀಸರು ದೋಷಾರೋಪಣಾ ಪಟ್ಟಿ (Chargesheet) ಸಲ್ಲಿಸಿದ್ದಾರೆ.
ಒಟ್ಟು 11 ಆರೋಪಿಗಳ ವಿರುದ್ಧ 380 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಆರೋಪಿಗಳ ಮೊಬೈಲ್‌ಗಳಲ್ಲಿ ದೊರಕಿದ ಸಾಕ್ಷ್ಯ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್, ವಿಡಿಯೋ ಲಿಂಕ್‌ಗಳು, ರಮ್ಯಾ ನೀಡಿದ ಹೇಳಿಕೆ, FSL ವರದಿ, ಹಾಗೂ ಅವರದ್ದೇ ಆದ ಒಪ್ಪಿಗೆಯ ಹೇಳಿಕೆ ಆಧಾರದ ಮೇಲೆ ಈ ಕ್ರಮ ಕೈಗೊಂಡಿದ್ದಾರೆ.
60 ದಿನಗಳ ಕಾಲಾವಧಿ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ತನಿಖಾ ಅಧಿಕಾರಿಗಳು ತುರ್ತಾಗಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇನ್ನು 6 ಮಂದಿ ಆರೋಪಿಗಳು ಈಗಲೂ ಪರಾರಿಯಾಗಿದ್ದು, ಅವರು ಸಿಕ್ಕಿ ಬಿದ್ದ ನಂತರ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಎಚ್ಚರಿಕೆಯಾಗಿದ್ದು, ಅಂತಹ ಆನ್‌ಲೈನ್ ಕೃತ್ಯಗಳ ವಿರುದ್ಧ ಕಾನೂನು ಕ್ರಮಗಳು ಬಿಗಿಗೊಳ್ಳುತ್ತಿರುವುದನ್ನು ಸೂಚಿಸುತ್ತದೆ.