ದೇಶ
ದೆಹಲಿಯಲ್ಲಿ 2 ಲಕ್ಷ ಅನರ್ಹ ರೇಷನ್ ಕಾರ್ಡ್ ಪತ್ತೆ – ಸತ್ತವರ ಹೆಸರಲ್ಲೂ ಪಡಿತರ ಚೀಟಿ, ಉದ್ಯಮಿಗಳಿಗೂ ಸೌಲಭ್ಯ!
ಕರ್ನಾಟಕದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂಬುದು ಬಹಿರಂಗವಾಗಿದೆ. ದೆಹಲಿಯಲ್ಲಿ ನಡೆಸಲಾದ ಸಮಗ್ರ ಸಮೀಕ್ಷೆ ವೇಳೆ 2 ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್ ರೇಷನ್ ಕಾರ್ಡ್‌ಗಳು ಪತ್ತೆಯಾಗಿದ್ದು, ಇದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನ ಬೆಚ್ಚಿಬೀಳುವಂತೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಹರೀಶ್ ಖುರಾನಾ (Harish Khurana), 2015 ರಿಂದ 2024ರ ಅವಧಿಯಲ್ಲಿ ವಿತರಣೆ ಮಾಡಲಾದ ಪಡಿತರ ಚೀಟಿಗಳ ಪರಿಶೀಲನೆಯಾಗುವ ವೇಳೆ ಈ ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದ್ದಾರೆ. ಬಡವರಿಗೆ ಮೀಸಲಾದ ಸಹಾಯಧನಗಳು ಅರ್ಹರ ಬದಲು ಉದ್ಯಮಿಗಳು, ಕಾರು ಮಾಲೀಕರು ಹಾಗೂ ಶ್ರೀಮಂತರ ಪಾಲಾಗುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2014-2024ರ ಅವಧಿಯಲ್ಲಿ ದೆಹಲಿಯಲ್ಲಿ 9.22 ಲಕ್ಷ ರೇಷನ್ ಕಾರ್ಡ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಹೆಚ್ಚಿನ ಅರ್ಜಿಗಳು ತಿರಸ್ಕೃತವಾಗಿವೆ. ಆದರೆ ಉಳಿದ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿದಾಗ, ವರ್ಷಕ್ಕೆ 6 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುವವರು, ಭಾರೀ ಆಸ್ತಿ ಹೊಂದಿರುವವರು ಹಾಗೂ ಜಿಎಸ್‌ಟಿ ಪಾವತಿಸುವ ಉದ್ಯಮಿಗಳು ಕೂಡ ಬಿಪಿಎಲ್ ಪಟ್ಟಿಯಲ್ಲಿ ಸೇರಿರುವುದು ಪತ್ತೆಯಾಗಿದೆ.
ಸತ್ತವರ ಹೆಸರಲ್ಲೂ ಕಾರ್ಡ್!
7 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಪೈಕಿ 2 ಲಕ್ಷ ಅನರ್ಹ ಕಾರ್ಡ್‌ಗಳು ಪತ್ತೆಯಾಗಿವೆ. ಅದರಲ್ಲಿ
- ಮೃತರ ಹೆಸರಿನಲ್ಲಿ 6,038 ಕಾರ್ಡ್‌ಗಳು,
- 16,000 ನಕಲಿ ಕಾರ್ಡ್‌ಗಳು,
- ವರ್ಷಕ್ಕೆ 6 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ 1.44 ಲಕ್ಷ ಕಾರ್ಡ್‌ಗಳು ಸೇರಿವೆ.
ಇದಲ್ಲದೆ, ಭಾರೀ ಭೂಮಿ-ಆಸ್ತಿ ಹೊಂದಿರುವ 1.59 ಲಕ್ಷ, ಕಾರು-ವಾಹನ ಹೊಂದಿರುವ 77,000, ಹಾಗೂ 25 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುವ 2,700 ಜಿಎಸ್‌ಟಿ ನೋಂದಾಯಿತ ಕಾರ್ಡ್‌ಗಳು ಪತ್ತೆಯಾಗಿವೆ.
2.76 ಲಕ್ಷ ಫಲಾನುಭವಿಗಳಿಗೆ ನೋಟಿಸ್
ಪರಿಶೀಲನೆ ವೇಳೆ ಗುರುತಿಸಲಾದ 2.76 ಲಕ್ಷ ಫಲಾನುಭವಿಗಳಿಗೆ ಶೋಕಾಸ್ ನೋಟಿಸ್ ಹಾಗೂ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಲಾಗಿದೆ. ಆದರೆ ಈವರೆಗೆ ಕೇವಲ 227 ಮಂದಿ ಮಾತ್ರ ಪ್ರತಿಕ್ರಿಯಿಸಿದ್ದು, ಇನ್ನೂ ಯಾವುದೇ ಕಾರ್ಡ್ ರದ್ದುಗೊಳಿಸಲಾಗಿಲ್ಲ ಎಂದು ಖುರಾನಾ ಸ್ಪಷ್ಟಪಡಿಸಿದ್ದಾರೆ.
ಇನ್ನು ಕಳೆದ 10 ವರ್ಷಗಳ ಪಡಿತರ ಚೀಟಿ ವಿತರಣೆಯ ಕುರಿತು ಶ್ವೇತಪತ್ರ ಬಿಡುಗಡೆಗೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು ಎಂದು ಬಿಜೆಪಿ ಶಾಸಕರು ತಿಳಿಸಿದ್ದಾರೆ. ಜೊತೆಗೆ ಹಿಂದಿನ ಎಎಪಿ ಸರ್ಕಾರದ ಅವಧಿಯಲ್ಲಿ ರೋಹಿಂಗ್ಯಾ ಹಾಗೂ ಬಾಂಗ್ಲಾದೇಶಿ ವಲಸಿಗರಿಗೆ ರೇಷನ್ ಕಾರ್ಡ್ ನೀಡಲಾಗಿದೆಯೇ? ಎಂಬುದನ್ನೂ ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ.