ರಾಜ್ಯ
ಧಾರವಾಡದಲ್ಲಿ ‘ಪತ್ರಕರ್ತರ ಭೋಜನ’ ನೆಪದಲ್ಲಿ 2 ಲಕ್ಷ ರೂ. ಗದ್ದಲ: ಸಚಿವ ಜಮೀರ್ ಹೆಸರು ಸುತ್ತ ವಿವಾದ
ಧಾರವಾಡ: ಮಾಧ್ಯಮದ ಪ್ರತಿನಿಧಿಗಳೆಂದು ಹೇಳಿಕೊಂಡ ಕೆಲ ವ್ಯಕ್ತಿಗಳು, ಪತ್ರಕರ್ತರ ಭೋಜನ ವ್ಯವಸ್ಥೆ ನೆಪದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ಖಾನ್ ಅವರಿಂದ 2 ಲಕ್ಷ ರೂ. ಪಡೆದಿರುವುದು ಇದೀಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ರಾಜಕೀಯ ಹಾಗೂ ಮಾಧ್ಯಮ ವಲಯಗಳಲ್ಲಿ ಗೊಂದಲ ಮತ್ತು ಅಸಮಾಧಾನಕ್ಕೆ ದಾರಿ ಮಾಡಿಕೊಟ್ಟಿದೆ.
ಜ.24ರಂದು ಹುಬ್ಬಳ್ಳಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರದ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಅದರ ಸಿದ್ಧತೆಗಾಗಿ ಸಚಿವ ಜಮೀರ್ ಅಹ್ಮದ್ಖಾನ್ ಧಾರವಾಡಕ್ಕೆ ಆಗಮಿಸಿದ್ದರು. ಈ ವೇಳೆ ತಮ್ಮನ್ನು ಮಾಧ್ಯಮದ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ಕೆಲವರು, “ಧಾರವಾಡದ ಎಲ್ಲ ಪತ್ರಕರ್ತರಿಗೆ ಭೂರಿ ಭೋಜನ ವ್ಯವಸ್ಥೆ ಮಾಡಿದರೆ ಕಾರ್ಯಕ್ರಮಕ್ಕೆ ಉತ್ತಮ ಪ್ರಚಾರ ಸಿಗುತ್ತದೆ” ಎಂದು ಸಚಿವರಿಗೆ ತಿಳಿಸಿದರು. ಕಾಂಗ್ರೆಸ್ನ ಯುವ ಮುಖಂಡರೊಬ್ಬರ ಮನೆಯಲ್ಲಿ ಸಚಿವರು ಊಟಕ್ಕೆ ಹೋದ ಸಂದರ್ಭದಲ್ಲಿ ಈ ವ್ಯಕ್ತಿಗಳು 2 ಲಕ್ಷ ರೂ. ಹಣವನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.
ಹಣ ಪಡೆಯುವ ಸಂದರ್ಭದ ಫೋಟೊವನ್ನು ಸಚಿವರ ಆತ್ಮೀಯರೊಬ್ಬರು ತೆಗೆದು ಮಾಧ್ಯಮದವರಿಗೆ ಕಳುಹಿಸಿದ್ದರಿಂದ, ಮಾಧ್ಯಮದವರಲ್ಲೇ ಗುದ್ದಾಟ ಆರಂಭವಾಗಿದೆ. ಮಂಗಳವಾರ ಸಚಿವ ಜಮೀರ್ ಅಹ್ಮದ್ಖಾನ್ ಧಾರವಾಡದ ಸರ್ಕಿಟ್ ಹೌಸ್ಗೆ ಬರುತ್ತಾರೆಂಬ ಮಾಹಿತಿ ತಿಳಿಯುತ್ತಿದ್ದಂತೆಯೇ, ಕೆಲ ಪತ್ರಕರ್ತರು ತಮಗೆ ಹಣ ತಲುಪಿಲ್ಲ ಎಂದು ಸಚಿವರ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಹಣ ಕೊಡುವುದಿದ್ದರೆ ನಮಗೆ ನೇರವಾಗಿ ಕೊಡಬೇಕಿತ್ತು, ಮಧ್ಯವರ್ತಿಗಳಿಗೆ ಏಕೆ?” ಎಂದು ಪ್ರಶ್ನಿಸಿರುವುದೂ ತಿಳಿದುಬಂದಿದೆ.
ಈ ವಿಚಾರವಾಗಿ ಮುನಿಸಿಕೊಂಡು ಬಂದಿದ್ದ ಮಾಧ್ಯಮದವರು, ಸಚಿವರ ಭರವಸೆಯ ನಂತರ ನಗುಮುಖದೊಂದಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ ಘಟನೆಯು ಮಾಧ್ಯಮ ನೈತಿಕತೆ ಹಾಗೂ ರಾಜಕೀಯ ಸಂಪರ್ಕಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ಇದೇ ಮೊದಲಲ್ಲ. ಇತ್ತೀಚೆಗೆ ಹೊಸ ವರ್ಷದ ಮುನ್ನಾದಿನ ಅಬಕಾರಿ ಸಚಿವರು ಧಾರವಾಡಕ್ಕೆ ಬಂದಾಗ, ಮಾಧ್ಯಮದವರಂತೆ ಹೇಳಿಕೊಂಡ ಕೆಲವರು ಸಚಿವರಿಂದ ಮದ್ಯದ ಬಾಟಲ್ಗಳನ್ನು ಗಿಫ್ಟ್ ಆಗಿ ಪಡೆದಿದ್ದ ಪ್ರಕರಣವೂ ಸ್ಮರಣೆಯಲ್ಲಿದೆ. ಈ ಎಲ್ಲಾ ಬೆಳವಣಿಗೆಗಳು ಜಿಲ್ಲೆಯಲ್ಲಿ ರಾಜಕೀಯ–ಮಾಧ್ಯಮ ಸಂಬಂಧಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.