ದೇಶ
“ವಾಚ್‌ಗಳು ನನ್ನದು, ಪಾರದರ್ಶಕತೆ ನನ್ನದು” — ಡಿಕೆಶಿ ತಿರುಗೇಟು
ಬೆಂಗಳೂರು: “ನನ್ನ ಬಳಿ ಇರುವ ದುಬಾರಿ ವಾಚ್‌ಗಳ ಬಗ್ಗೆ ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ಆ ವಾಚ್ ಖರೀದಿ ಹೇಗಾಯಿತು ಎನ್ನುವುದು ನನಗೆ ಗೊತ್ತು, ಬಿಜೆಪಿಯವರಿಗೇನು ಗೊತ್ತು?” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ತಿರುಗೇಟು ನೀಡಿದರು.
ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು, “ಅಫಿಡವಿಟ್‌ನಲ್ಲಿ ದುಬಾರಿ ವಾಚ್ ವಿವರ ನೀಡಿಲ್ಲ” ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, “ಅಫಿಡವಿಟ್ ನನಗೆ ಗೊತ್ತು. ಕಾಸು ಕೊಟ್ಟಿರುವುದು ನಾನು, ಕ್ರೆಡಿಟ್ ಕಾರ್ಡ್ ಬಳಸಿದ್ದು ನಾನು. ರೋಲೆಕ್ಸ್ ವಾಚ್ ಬಗ್ಗೆ ಕೂಡ ವಿವರಿಸಿದ್ದೇನೆ. ನಾರಾಯಣಸ್ವಾಮಿ ಅವರಿಂದ ಕಲಿಯುವುದಕ್ಕೆ ಏನೂ ಇಲ್ಲ” ಎಂದು ಹೇಳಿದರು.
“ಇದು ಕದ್ದ ವಾಚೇ?” ಎಂದು ನಾರಾಯಣಸ್ವಾಮಿ ಕೇಳಿದ್ದ ಪ್ರಶ್ನೆಗೆ ಡಿಕೆಶಿ ವ್ಯಂಗ್ಯವಾಗಿ, “ಹೌದು, ನಾನು ಅವರ ಮನೆಯಿಂದಲೇ ಕದ್ದಿದ್ದೇನೆ” ಎಂದು ತಿರುಗೇಟು ನೀಡಿದರು.
ಇದಕ್ಕೂ ಮೊದಲು, ಜಗನ್ನಾಥ ಭವನದಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಸಿಎಂ ಮತ್ತು ಡಿಕೆಶಿ ಇಬ್ಬರೂ ಕಾರ್ಟಿಯರ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಾಚ್‌ಗಳನ್ನು ಧರಿಸಿರುವುದಾಗಿ ಆರೋಪಿಸಿದ್ದರು. “ರೋಲೆಕ್ಸ್ 9 ಲಕ್ಷ, ಹೂಬ್ಲೋಟ್ 23.90 ಲಕ್ಷ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಆದರೆ 43 ಲಕ್ಷ ಮೌಲ್ಯದ ಕಾರ್ಟಿಯರ್ ವಾಚ್ ವಿವರವೇ ಇಲ್ಲ. ಇದು ಕದ್ದ ಮಾಲೇ? ಕೊಂಡ ಮಾಲೇ? ಕಾರ್ಡ್ ಪಾವತಿ ಮಾಡಿದರೆ ದಾಖಲೆ ತೋರಿಸಲಿ” ಎಂದು ಒತ್ತಾಯಿಸಿದ್ದರು.
ಇದರ ನಡುವೆ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಗರಿಗೆದರಿದ್ದು, ಡಿಕೆಶಿ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದದ್ದು ರಾಜಕೀಯ ಊಹಾಪೋಹ ಹುಟ್ಟಿಸಿದೆ. “ಸ್ನೇಹಿತನ ಮಗನ ಮದುವೆಗೆ ಬಂದಿದ್ದೇನೆ. ಯಾವುದೇ ರಾಜಕೀಯ ಕಾರ್ಯಸೂಚಿ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರೂ, ಕೆಲ ದಿನಗಳ ಹಿಂದೆ “ಕೇಂದ್ರ ಸಚಿವರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದೇನೆ” ಎಂದು ಹೇಳಿದ್ದರು.