ಹಾಸನಾಂಬೆ ಕೃಪೆ ಡಿಕೆಶಿಗೆ ಮಹಾಪ್ರಸಾದ! ದೇವಿಯ ಹೂವು ಎರಡು ಬಾರಿ ಬಿದ್ದು ಶುಭ ಸೂಚನೆ | Hosa Suddi

ರಾಜ್ಯ

ಹಾಸನಾಂಬೆ ಕೃಪೆ ಡಿಕೆಶಿಗೆ ಮಹಾಪ್ರಸಾದ! ದೇವಿಯ ಹೂವು ಎರಡು ಬಾರಿ ಬಿದ್ದು ಶುಭ ಸೂಚನೆ

Published

on

ಹಾಸನ: ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ಗರಿಷ್ಠ ಮಟ್ಟದಲ್ಲಿರುವ ಹೊತ್ತಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಹಾಸನಾಂಬೆ ದೇವಿಯ ಸನ್ನಿಧಿಯಲ್ಲಿ ಮಹಾಪ್ರಸಾದ ದೊರಕಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಮಂಗಳವಾರ ರಾತ್ರಿ ಪತ್ನಿಯೊಂದಿಗೆ ಹಾಸನಾಂಬೆ ದೇವಾಲಯಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ, ನಾರಾಯಣಿ ನಮಸ್ಕಾರ ಮಂತ್ರದ ಮೂಲಕ ದೇವಿಯ ಆರಾಧನೆ ಮಾಡಿದರು. ದುರ್ಗಾ ಸಪ್ತಸತಿಯ 11ನೇ ಅಧ್ಯಾಯದ ಪಠಣದ ನಂತರ ದೇವಿಯ ಬಲಗಡೆಯಿಂದ ಹೂವು ಬಿದ್ದು — ಅದು ಎರಡು ಬಾರಿ ಪುನರಾವರ್ತನೆಯಾಗಿ ಎಲ್ಲರ ಗಮನ ಸೆಳೆಯಿತು.

ಅರ್ಚಕರು ಈ ಹೂವು ಬೀಳುವುದನ್ನು ಶುಭಸೂಚನೆ ಎಂದು ವಿವರಿಸಿದ್ದು, “ಶತ್ರುವಿನ ಮೇಲೆ ವಿಜಯ ಸಾಧಿಸಲು ಖಡ್ಗಮಾಲಾ ಸ್ತೋತ್ರ ಪಠಿಸಲಾಯಿತು” ಎಂದರು.

ಪೂಜೆ ಬಳಿಕ ಡಿಕೆಶಿ ಮಾತನಾಡಿ, “ನಾನುಂಟು, ಆ ತಾಯಿ ಉಂಟು. ನಮಗೆ, ನಿಮಗೆ ಎಲ್ಲರಿಗೂ ಭಗವಂತ ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಹೇಳಿದರು.

ಇದಾದ ಬಳಿಕ ಇಂದು (ಬುಧವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹಾಸನಾಂಬೆ ಸನ್ನಿಧಿಗೆ ಆಗಮಿಸಿ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿ, ಮಧ್ಯಾಹ್ನ 12 ಗಂಟೆಗೆ ವಾಪಸಾಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಿಎಂ ಹಾಸನಾಂಬೆ ದರ್ಶನ ಪಡೆಯುತ್ತಿರುವುದು ಗಮನಾರ್ಹ.

Trending

Exit mobile version