DK Shivakumar: ಜಾತಿಗಿಂತ ಮಾನವೀಯತೆಯೇ ಮುಖ್ಯ 40 ವರ್ಷಗಳ ರಾಜಕಾರಣದಲ್ಲಿ ಯಾರ ಜಾತಿಯನ್ನೂ ಕೇಳಿಲ್ಲ ಎಂದ ಸಿಎಂ ಡಿ.ಕೆ. ಶಿವಕುಮಾರ್ |

ರಾಜ್ಯ

DK Shivakumar: ಜಾತಿಗಿಂತ ಮಾನವೀಯತೆಯೇ ಮುಖ್ಯ 40 ವರ್ಷಗಳ ರಾಜಕಾರಣದಲ್ಲಿ ಯಾರ ಜಾತಿಯನ್ನೂ ಕೇಳಿಲ್ಲ ಎಂದ ಸಿಎಂ ಡಿ.ಕೆ. ಶಿವಕುಮಾರ್

Published

on

ರಾಮನಗರ: ನನಗೆ ಜಾತಿಯ ಮೇಲೆ ನಂಬಿಕೆ ಇಲ್ಲ. ಮನುಷ್ಯತ್ವವೇ ಮುಖ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಹಾಗೂ ಬಸವಣ್ಣನವರ ಆಶಯಗಳನ್ನು ಮುಂದಿಟ್ಟುಕೊಂಡೇ ರಾಜಕಾರಣ ಮಾಡುತ್ತಿದ್ದೇನೆ. ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾರನ್ನೂ ನೀನು ಯಾವ ಜಾತಿ ಎಂದು ಕೇಳಿಲ್ಲ. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡ ಧರ್ಮ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಹೇಳಿದರು.

ಕನಕಪುರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪರಿಶಿಷ್ಟ ಜಾತಿ ಒಕ್ಕೂಟದ ವತಿಯಿಂದ ಶನಿವಾರ ಆಯೋಜಿಸಿದ್ದ ಕೃತಜ್ಞತಾ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ರಾಜಕೀಯ ಜೀವನದಲ್ಲಿ ಕನಕಪುರ ಹಾಗೂ ಸಾತನೂರು ಜನರು ನೀಡಿದ ಬೆಂಬಲವನ್ನು ಸ್ಮರಿಸಿದ ಶಿವಕುಮಾರ್, ನನಗೆ ಸಿಕ್ಕಿರುವ ಅಧಿಕಾರ ನನ್ನದಲ್ಲ, ಅದು ನಿಮ್ಮದು. ಸಾತನೂರು ಮತ್ತು ಕನಕಪುರದ ಜನತೆ ನನ್ನನ್ನು 10 ಬಾರಿ ಆಯ್ಕೆ ಮಾಡಿ ಆಶೀರ್ವದಿಸಿದ್ದಾರೆ. ಇಂದು ನಡೆಯುತ್ತಿರುವ ಈ ಅಭಿಮಾನದ ಸನ್ಮಾನದ ಶ್ರೇಯಸ್ಸು ನಿಮಗೇ ಸಲ್ಲಬೇಕು. ಜನರ ಸೇವೆ ಮಾಡುವ ಅವಕಾಶವನ್ನು ನೀಡಿದ್ದೀರಿ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಕ್ಷೇತ್ರದ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

DK Shivakumar ನಾನು ನಿಮ್ಮ ಮನೆ ಮಗ, ನುಡಿದಂತೆ ನಡೆಯುತ್ತೇನೆ

ಇಲ್ಲಿಯವರೆಗೆ ಜನರಿಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ಮುಂದೆಯೂ ಅದೇ ರೀತಿ ನಡೆದುಕೊಳ್ಳುತ್ತೇನೆ. ಕನಕಪುರ ಕ್ಷೇತ್ರದ ರಸ್ತೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ. ಕನಕಪುರ ಎಂದಾಕ್ಷಣ ಇಡೀ ದೇಶವೇ ತಿರುಗಿ ನೋಡುವಂತೆ ಮಾಡುವುದು ನನ್ನ ಗುರಿ ಎಂದು ಹೇಳಿದರು.

ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ ಚುನಾವಣೆಗೆ ವೈರಮುಡಿ ಅವರನ್ನು ಆಯ್ಕೆ ಮಾಡಿದ್ದನ್ನು ನೆನಪಿಸಿಕೊಂಡ ಶಿವಕುಮಾರ್, ನನ್ನ ನಿರ್ಧಾರವನ್ನು ನೋಡಿ ಹಲವರು ನಕ್ಕಿದ್ದರು. ನನ್ನನ್ನು ಆ ತೀರ್ಮಾನದಿಂದ ಹಿಂದೆ ಸರಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ನಾನು ಜಗ್ಗಲಿಲ್ಲ. ನನಗೆ ಜಾತಿ ಮುಖ್ಯವಲ್ಲ. ವ್ಯಕ್ತಿ ಮತ್ತು ಅವರ ಮೇಲಿನ ನಂಬಿಕೆ ಮುಖ್ಯ ಎಂದು ಹೇಳಿದರು.

ಮಳವಳ್ಳಿಯಿಂದ ಕುಣಿಗಲ್ ಗಡಿ ಹಾಗೂ ದೇವನಹಳ್ಳಿವರೆಗೆ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರೇ. ಈಗ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟ ಬಳಿಕ ಆಸ್ತಿಗಳ ಮೌಲ್ಯ ಹೆಚ್ಚಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಮಾಡಲು ಜಿಲ್ಲೆಗೆ ಹೆಸರು ಬದಲಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ನಾನು ಎಂದಾದರೂ ನಿಮ್ಮ ಬಳಿ ಬಂದು ಭೂ ವ್ಯವಹಾರ ಮಾಡಿದ್ದೀನಾ ಎಂದು ಪ್ರಶ್ನಿಸಿದರು.

ನಾನು ನಿಮ್ಮ ಮನೆ ಮಗನಂತೆ. ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆ. ನಾನು ಮುಖ್ಯಮಂತ್ರಿ ಆಗಿರಬಹುದು. ಆದರೆ ನಿಮ್ಮ ಬಳಿ ಮುಖ್ಯಮಂತ್ರಿ ಎಂದು ತೋರಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಹೇಳಿದರು.

ಚಂದ್ರಶೇಖರ್ ಮೂರ್ತಿ ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ಟಿಕೆಟ್ ತಪ್ಪಿದ್ದ ಘಟನೆಯನ್ನೂ ಅವರು ನೆನಪಿಸಿಕೊಂಡರು. ಆಗ ಕ್ಷೇತ್ರದ ಜನರು ತಮ್ಮ ಬೆಂಬಲಕ್ಕೆ ನಿಂತಿದ್ದರು. ಸೈಕಲ್ ಗುರುತಿನಡಿ ಚುನಾವಣೆ ಎದುರಿಸಿದಾಗ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಫೋಟೋಗಳನ್ನು ಇಟ್ಟುಕೊಂಡು ಜನರು ಪ್ರಚಾರ ಮಾಡಿದ್ದರು. ಪರಿಶಿಷ್ಟ ಜಾತಿ, ಧರ್ಮ ಹಾಗೂ ಹಿಂದುಳಿದ ವರ್ಗಗಳ ಜನರು ತಮ್ಮನ್ನು ಬೆಂಬಲಿಸಿದ್ದರು. ಆ ಚುನಾವಣೆಯಲ್ಲಿ ಕೇವಲ 3 ಸಾವಿರ ಮತಗಳನ್ನು ಪಡೆದಿದ್ದರೂ, ನಂತರದ ಚುನಾವಣೆಯಲ್ಲಿ ಜನರು ತುಂಬು ಹೃದಯದಿಂದ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟರು. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

DK Shivakumar ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ

ತಾವು ಶಿಕ್ಷಣದಿಂದ ವಂಚಿತವಾದಂತಹ ಪರಿಸ್ಥಿತಿ ಕ್ಷೇತ್ರದ ಮಕ್ಕಳಿಗೆ ಎದುರಾಗಬಾರದು ಎಂಬ ಉದ್ದೇಶದಿಂದ ಕನಕಪುರ ಕ್ಷೇತ್ರದಲ್ಲಿ ಸುಮಾರು 10 ಕಡೆ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಸಿಎಸ್ಆರ್ ಅನುದಾನದ ನೆರವಿನಿಂದ ಎಗ್ಗನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ, ಹೊಸದುರ್ಗ, ಚಿಕ್ಕಮುದುವಾಡಿ ಸೇರಿದಂತೆ ಹಲವು ಕಡೆ ಶಾಲೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಕೆಮ್ಮಳೆ ಮತ್ತು ಸಾತನೂರು ಸಮೀಪವೂ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸುಮಾರು 26 ಲಕ್ಷ ಐಟಿ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಗ್ರಾಮೀಣ ಭಾಗದ ಯುವಕರಿಗೂ ತಂತ್ರಜ್ಞಾನ ಮತ್ತು ಕೌಶಲ್ಯ ಆಧಾರಿತ ಉದ್ಯೋಗಾವಕಾಶಗಳು ಸಿಗಬೇಕು. ಈ ಉದ್ದೇಶದಿಂದ ಶಿಕ್ಷಣ, ತಾಂತ್ರಿಕ ತರಬೇತಿ ಹಾಗೂ ಕೈಗಾರಿಕೆಗಳ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ವಿದ್ಯೆ ಯಾರೂ ಕಳ್ಳತನ ಮಾಡಲಾಗದ, ಅಗ್ನಿಯಲ್ಲಿ ಸುಡಲಾಗದ ಹಾಗೂ ನೀರಿನಲ್ಲಿ ನೆನೆಯಲಾಗದ ಗುಪ್ತನಿಧಿ ಎಂದು ಹಿರಿಯರು ಹೇಳುತ್ತಿದ್ದರು. ಅಂತಹ ಅಮೂಲ್ಯ ಸಂಪತ್ತನ್ನು ವಿದ್ಯಾರ್ಥಿ ಜೀವನದಲ್ಲಿ ಕಳೆದುಕೊಳ್ಳಬಾರದು. ತಾನು ಪದವಿ ಪಡೆಯಲು ಸಾಧ್ಯವಾಗದೆ 43ರಿಂದ 47ನೇ ವಯಸ್ಸಿನಲ್ಲಿ ಪದವಿ ಪೂರ್ಣಗೊಳಿಸಿದೆ. ಆದರೆ ನೀವು ಸಮಯಕ್ಕೆ ಸರಿಯಾಗಿ ಪದವಿ ಪಡೆದು ಉತ್ತಮ ವಿದ್ಯಾವಂತರಾಗಿ, ಬುದ್ಧಿವಂತರಾಗಿ ಕನಕಪುರಕ್ಕೆ ಮಾತ್ರವಲ್ಲ, ದೇಶಕ್ಕೆ ಆಸ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

DK Shivakumar ಶಿಕ್ಷಣಕ್ಕೆ ಸೀಟು ಸಿಗದ ನೋವೇ ರಾಜಕೀಯಕ್ಕೆ ಬರಲು ಕಾರಣ

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಶಿವಕುಮಾರ್, ಕರಿಯಪ್ಪನವರು ಹಾಗೂ ತಮ್ಮ ಹಿರಿಯರು ಹೈಸ್ಕೂಲ್‌ಗೆ ಸೇರಿಸಲು ಪ್ರಯತ್ನಿಸಿದ್ದರು. ಅಂದಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನ ಸ್ವಾಮಿ ಅವರ ಬಳಿಗೂ ಕರೆದೊಯ್ದಿದ್ದರು. ಆದರೆ ಶಿಕ್ಷಣಕ್ಕೆ ಪ್ರವೇಶ ಸಿಗಲಿಲ್ಲ. ಅಂದೇ ರಾಜಕೀಯಕ್ಕೆ ಬಂದು ಶಾಸಕನಾಗಬೇಕು ಎಂದು ನಿರ್ಧರಿಸಿದ್ದೆ ಎಂದು ಹೇಳಿದರು.

ರಾಜಕೀಯದಲ್ಲಿ ಬೆಳೆದು ಇಂದು ರಾಜ್ಯದ ಪ್ರತಿನಿಧಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಆದರೆ ಬೆಂಗಳೂರಿನಲ್ಲಿ ಏನೇ ಇದ್ದರೂ ಕನಕಪುರ ಕ್ಷೇತ್ರಕ್ಕೆ ಬಂದಾಗ ನಾನು ನಿಮ್ಮ ಸೇವಕ, ನಿಮ್ಮ ಮನೆ ಮಗ. ನಿಮ್ಮ ತಂದೆ-ತಾಯಂದಿರು ಹಾಗೂ ಕಾರ್ಯಕರ್ತರ ಮುಂದೆ ಮುಖ್ಯಮಂತ್ರಿ ಎಂಬ ಸ್ಥಾನಕ್ಕಿಂತ ನನ್ನ ಕರ್ತವ್ಯವೇ ಮುಖ್ಯ ಎಂದು ಶಿವಕುಮಾರ್ ಹೇಳಿದರು.

DK Shivakumar ಐದು ಗ್ಯಾರಂಟಿಗಳಿಗಾಗಿ ₹52 ಸಾವಿರ ಕೋಟಿ ವೆಚ್ಚ

ಈ ಬಾರಿ ನಿಮ್ಮ ಬಳಿ ಮತ ಕೇಳಲು ಬರಲೇ ಇಲ್ಲ. ಸಿದ್ದರಾಮಯ್ಯ ಮತ್ತು ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆವು. ಜನರು ಕಾಂಗ್ರೆಸ್‌ಗೆ 136 ಸ್ಥಾನಗಳನ್ನು ನೀಡಿದ್ದಾರೆ. ಕ್ಷೇತ್ರದ ಹಾಗೂ ರಾಜ್ಯದ ಜನತೆಗೆ ನೀಡಿದ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಮನೆ ಯಜಮಾನಿಯ ಖಾತೆಗೆ ₹2 ಸಾವಿರ ನೀಡಲಾಗುತ್ತಿದೆ. ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ₹52 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು.

DK Shivakumar ಮೇಕೆದಾಟು ಯೋಜನೆ ಪೂರ್ಣಗೊಳಿಸುವ ಭರವಸೆ

ನಮ್ಮ ಕ್ಷೇತ್ರದ ಜನರು ಕ್ಷೇತ್ರದಲ್ಲೇ ಉದ್ಯೋಗ ಪಡೆಯಬೇಕು. ಉದ್ಯೋಗಕ್ಕಾಗಿ ಯಾರೂ ವಲಸೆ ಹೋಗಬಾರದು ಎಂಬ ಉದ್ದೇಶದಿಂದ ಚನ್ನಪಟ್ಟಣ-ರಾಮನಗರದ ಮಧ್ಯೆ ಬೃಹತ್ ಡೈರಿ ನಿರ್ಮಿಸಲಾಗಿದೆ. ಹಾಲಿನ ಬೆಲೆಯನ್ನು ₹7 ಹೆಚ್ಚಿಸಿ ರೈತರ ಬದುಕಿಗೆ ನೆರವಾಗುವ ಪ್ರಯತ್ನ ಮಾಡಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಪ್ರತಿ ಹಳ್ಳಿಗೂ ಕಾವೇರಿ ನೀರು ಹರಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಎಂದು ಜಿಲ್ಲೆಗೆ ಹೆಸರು ಇಟ್ಟಿದ್ದೀರಿ. ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಕ್ಷೇತ್ರದ ಜನರು ಆದೇಶಿಸಿದ್ದಾರೆ. ಅದಕ್ಕೆ ತಲೆಬಾಗಿ ಯೋಜನೆ ರೂಪಿಸಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲೂ ನಮಗೆ ನ್ಯಾಯ ಸಿಕ್ಕಿದೆ. ಈ ಯೋಜನೆ ನನ್ನ ಅವಧಿಯಲ್ಲೇ ಪೂರ್ಣಗೊಳ್ಳಬೇಕು. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

also read: https://hosasuddi.in/dk-shivakumar-japan-visit/

DK Shivakumar ಬೆಂಗಳೂರು ದಕ್ಷಿಣದಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ

ಬೆಂಗಳೂರು ದಕ್ಷಿಣ ಭಾಗದಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ ಎಂದು ಶಿವಕುಮಾರ್ ಹೇಳಿದರು. ಚನ್ನಪಟ್ಟಣದ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು, ರಾಮನಗರದ ವಿಶ್ವವಿದ್ಯಾಲಯ, ಹಾರೋಹಳ್ಳಿ ಹಾಗೂ ಕನಕಪುರದ ಮಧ್ಯೆ ದಯಾನಂದ ಸಾಗರ ಕಾಲೇಜು ಸೇರಿದಂತೆ ವೈದ್ಯಕೀಯ ಶಿಕ್ಷಣಕ್ಕೆ ಹಲವು ಅವಕಾಶಗಳು ಸೃಷ್ಟಿಯಾಗಿವೆ.

ಇಡೀ ಭಾರತದಲ್ಲಿ ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳು ಇರುವ ಉದಾಹರಣೆ ಇಲ್ಲ. ಆದರೆ ನಮ್ಮ ಕ್ಷೇತ್ರದಲ್ಲಿ ಈ ಅವಕಾಶ ಸಿಕ್ಕಿದೆ. ಕ್ಷೇತ್ರದ ಜನರ ಬದುಕಿನಲ್ಲಿ ಬದಲಾವಣೆ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಸಾತನೂರು-ಕೆಂಬಾಳ ಬಳಿ, ಕಲ್ಲಹಳ್ಳಿ, ಮರಿಯ್ಯನ ದೊಡ್ಡಿ ಸೇರಿದಂತೆ ಸುಮಾರು 10 ಕಡೆ ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ನಾನು ಪಡೆದ ಶಿಕ್ಷಣಕ್ಕಿಂತ ನೀವು ಉತ್ತಮ ಶಿಕ್ಷಣ ಪಡೆಯಬೇಕು. ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು.

DK Shivakumar ಸಾತನೂರು ಟ್ಯಾಲೆಂಟ್ ಪಾರ್ಕ್ ಆಗಿಸುವ ಗುರಿ

ಇದೇ ಸಂದರ್ಭದಲ್ಲಿ ಸಾತನೂರಿನಲ್ಲಿ ರೂರಲ್ ಎಜುಕೇಷನ್ ಸೊಸೈಟಿ ವತಿಯಿಂದ ಆರಂಭಿಸಿರುವ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಶಿವಕುಮಾರ್ ಉದ್ಘಾಟಿಸಿದರು.

ಸಾತನೂರನ್ನು ಟ್ಯಾಲೆಂಟ್ ಪಾರ್ಕ್ ಆಗಿ ರೂಪಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಯುವಕರಿಗೂ ನಗರ ಪ್ರದೇಶದ ಯುವಕರಿಗೆ ಸಿಗುವಂತಹ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾಧಾರಿತ ತರಬೇತಿ ದೊರೆಯಬೇಕು. ಈ ಮೂಲಕ ಗ್ರಾಮೀಣ ಯುವಕರಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂಬುದು ಸರ್ಕಾರದ ಆಶಯ ಎಂದು ಶಿವಕುಮಾರ್ ಹೇಳಿದರು.

Trending

Exit mobile version