ದೇಶ
ನ್ಯಾಷನಲ್ ಹೆರಾಲ್ಡ್ ಪ್ರಕರಣ – ಡಿಕೆ ಬ್ರದರ್ಸ್ ಗೆ ದೆಹಲಿ ಪೊಲೀಸರ ನೋಟಿಸ್; ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಕೇಸ್ ಸಂಬಂಧ ದೆಹಲಿ ಪೊಲೀಸ್ ನೋಟಿಸ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿದಂತೆ, ಡಿಸೆಂಬರ್ 19 ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಹಾಗೂ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಈ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಡಿಕೆಶಿ ತಿಳಿಸಿದರು.
ಈ ಪ್ರಕರಣದ ತನಿಖೆ ಆರ್ಥಿಕ ಅಪರಾಧಗಳ ವಿಭಾಗದ ದೆಹಲಿ ಪೊಲೀಸರು ನಡೆಸುತ್ತಿದ್ದಾರೆ. ಹಣಕಾಸು ಮತ್ತು ವಹಿವಾಟಿನ ಮಾಹಿತಿಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಡಿಕೆಶಿ ಹೇಳಿದರು: “ಈ ಹಿಂದೆಯೇ ಎಲ್ಲಾ ದಾಖಲೆ ಸಲ್ಲಿಸಿದ್ದೇವೆ. ಇದು ರಾಜಕೀಯ ಪ್ರೇರಿತ ನೋಟಿಸ್ ಆಗಿದೆ. ಇಡಿ ಅಧಿಕಾರಿಗಳಿಗೆ ಈಗಾಗಲೇ ದಾಖಲೆ ನೀಡಲಾಗಿದೆ. ಕಿರುಕುಳ ನೀಡೋಕೆ ದೆಹಲಿ ಪೊಲೀಸರ ನೋಟಿಸ್ ಬಂದಿದೆ.”
ನವೆಂಬರ್ 29 ರಂದು ನೀಡಲಾದ ನೋಟಿಸ್‌ನಲ್ಲಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3 ರಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಪ್ರಮುಖ ಮಾಹಿತಿ ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.