ದೇಶ

“ನಾನು ಬ್ಲಾಕ್‌ಮೇಲ್ ಮಾಡುವವನು ಅಲ್ಲ” — ದೆಹಲಿಯಿಂದ ಡಿಕೆ ಶಿವಕುಮಾರ್ ಖಡಕ್ ಸ್ಪಷ್ಟನೆ!

Published

on

ಬೆಂಗಳೂರು/ದೆಹಲಿ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರವಾಗಿರುವ ಸಂದರ್ಭದಲ್ಲಿ ದೆಹಲಿಗೆ ತೆರಳಿದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯ ಸಮಾಲೋಚನೆಗಳಲ್ಲಿ ನಿರತರಾಗಿದ್ದಾರೆ. ತಮ್ಮ ವಿರುದ್ಧ ಹರಿದಾಡುತ್ತಿದ್ದ ವದಂತಿಗಳಿಗೆ ಅವರು ನೇರವಾಗಿ ಸ್ಪಷ್ಟನೆ ನೀಡಿದ್ದು, ಪಕ್ಷದ ಶಿಸ್ತಿಗೆ ಬದ್ಧರಾಗಿರುವುದಾಗಿ ಖಡಕ್ ಸಂದೇಶ ನೀಡಿದ್ದಾರೆ.

“ನಾನು ಪಕ್ಷದ ಶಿಸ್ತಿನ ಸಿಪಾಯಿ. ಹಗಲು-ರಾತ್ರಿ ದುಡಿದು ಕಾಂಗ್ರೆಸ್ ಕಟ್ಟಿದ್ದೇನೆ. ಬ್ಲಾಕ್‌ಮೇಲ್ ಮಾಡುವ ವ್ಯಕ್ತಿ ನಾನಲ್ಲ,” ಎಂದು ಶಿವಕುಮಾರ್ ಹೇಳಿದ್ದಾರೆ.

ರಾಜೀನಾಮೆ ವದಂತಿಗಳಿಗೆ ಬ್ರೇಕ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಗೆ ತೆರೆ ಎಳೆದು, “ನನ್ನ ಮಾನಸಿಕ, ದೈಹಿಕ ಮತ್ತು ರಾಜಕೀಯ ಆರೋಗ್ಯ ಉತ್ತಮವಾಗಿದೆ. ನಾನೇಕೆ ರಾಜೀನಾಮೆ ನೀಡಬೇಕು? ಅಂತಹ ಯಾವುದೇ ಪರಿಸ್ಥಿತಿ ಇಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ದೆಹಲಿ ಭೇಟಿಗೆ ರಾಜಕೀಯ ಬಣ್ಣ ಬೇಡ: “ಈ ಭೇಟಿಗೆ ರಾಜಕೀಯ ಬಣ್ಣ ಕೊಡಬೇಡಿ. ನೂರು ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಿಸಿಕೊಳ್ಳಲು, ‘ಗಾಂಧಿ ಭಾರತ’ ಪುಸ್ತಕ ಬಿಡುಗಡೆ ದಿನಾಂಕ ನಿಗದಿಗೆ ಹಾಗೂ ಸಂಸ್ಥಾಪನಾ ದಿನಾಚರಣೆ ಕುರಿತು ಚರ್ಚಿಸಲು ಬಂದಿದ್ದೇನೆ,” ಎಂದರು.

ಸಂಪುಟ ಪುನಾರಚನೆ ಬಗ್ಗೆ ಸ್ಪಷ್ಟನೆ: ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಅವರು ಜಾಣ್ಮೆಯಿಂದ ಪ್ರತಿಕ್ರಿಯಿಸಿ, “ಅದು ಮುಖ್ಯಮಂತ್ರಿಗಳ ವಿಷಯ. ಹೈಕಮಾಂಡ್ ಜೊತೆಗೆ ಅವರು ಚರ್ಚಿಸುತ್ತಾರೆ. ನನ್ನನ್ನು ಕರೆದರೆ ನಾನು ಹಾಜರಾಗುತ್ತೇನೆ,” ಎಂದು ಹೇಳಿದರು.

ಪಕ್ಷ ಕಚೇರಿ ನಿರ್ಮಾಣದ ಗುರಿ:
ಡಿ.ಕೆ.ಶಿ ಪಕ್ಷ ಸಂಘಟನೆಯ ಬಲವರ್ಧನೆ ಬಗ್ಗೆ ಮಾತನಾಡುತ್ತಾ, “ನೂರು ಕಚೇರಿಗಳನ್ನು ನಿರ್ಮಿಸುವ ಗುರಿ ನಮ್ಮದು. 75–80 ಕಡೆಗಳಲ್ಲಿ ಜಾಗ ಈಗಾಗಲೇ ಸಿದ್ಧವಾಗಿದೆ. ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ನಾನೇ 2.30 ಕೋಟಿ ರೂ. ಪಾವತಿಸಿದ್ದೇನೆ. ಪಕ್ಷ ಹೇಳಿದವರೆಗೂ ನಾನು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತೇನೆ,” ಎಂದರು.

Trending

Exit mobile version