ದಾರಿ ತಪ್ಪಿಸುವ ಸುದ್ದಿಗಳಿಗೆ ತರಬೇತಿ ಅಗತ್ಯ – ಮಾಧ್ಯಮಕ್ಕೆ ಡಿಕೆಶಿ ಕಿವಿಮಾತು | Hosa Suddi

ದೇಶ

ದಾರಿ ತಪ್ಪಿಸುವ ಸುದ್ದಿಗಳಿಗೆ ತರಬೇತಿ ಅಗತ್ಯ – ಮಾಧ್ಯಮಕ್ಕೆ ಡಿಕೆಶಿ ಕಿವಿಮಾತು

Published

on

ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪತ್ರಕರ್ತರಿಗೆ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ವಿಶೇಷ ಕಾಲೇಜು ಆರಂಭಿಸಬೇಕು. ಹಿರಿಯ ಪತ್ರಕರ್ತರ ಅನುಭವವನ್ನು ಬಳಸಿ ಯುವ ಪತ್ರಕರ್ತರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಈ ಉದ್ದೇಶಕ್ಕಾಗಿ ಸರ್ಕಾರದಿಂದ 1 ಎಕರೆ ಜಾಗ ನೀಡಲು ಸಿದ್ಧವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮಂಗಳವಾರ ನಡೆದ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, “ಪತ್ರಕರ್ತರು ಕೇಳುವ ಪ್ರಶ್ನೆಗಳ ಮೇಲೆ ಸರ್ಕಾರದ ಪ್ರತಿಕ್ರಿಯೆ ನಿಂತಿರುತ್ತದೆ. ಕೆಲವೊಮ್ಮೆ ಹೇಳದ ಮಾತನ್ನು ಹೇಳಿದ್ದಾರೆ ಎಂದು ಸುಳ್ಳು ಹೇಳಿ ಪ್ರತಿಕ್ರಿಯೆ ಕೇಳಲಾಗುತ್ತದೆ. ಇಂತಹ ದಾರಿ ತಪ್ಪಿಸುವ ಪ್ರಶ್ನೆಗಳಿಗೆ ಪ್ರೆಸ್ ಕ್ಲಬ್‌ವೇ ತರಬೇತಿ ನೀಡಬೇಕು. ಸಮಾಜವನ್ನು ಒಡೆಯುವ ಮತ್ತು ಅಶಾಂತಿ ಸೃಷ್ಟಿಸುವವರಿಗೆ ಪಾಠ ಕಲಿಸಬೇಕು” ಎಂದು ಹೇಳಿದರು.

“ಬಿಡಿಎ ಅಧ್ಯಕ್ಷರು ಇಲ್ಲೇ ಇದ್ದಾರೆ. ಅರ್ಜಿ ಸಲ್ಲಿಸಿದರೆ ಅಗತ್ಯವಿರುವ ಜಾಗವನ್ನು ಸರ್ಕಾರ ಒದಗಿಸುತ್ತದೆ” ಎಂದು ಭರವಸೆ ನೀಡಿದರು. ಈ ವರ್ಷ ಬದುಕಿನಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿ, ಪ್ರಶಸ್ತಿ ಪುರಸ್ಕೃತರಿಗೆ ವೈಯಕ್ತಿಕವಾಗಿಯೂ ಹಾಗೂ ಸರ್ಕಾರದ ಪರವಾಗಿಯೂ ಅಭಿನಂದನೆ ಸಲ್ಲಿಸಿದರು.

ಮಾಧ್ಯಮ ಮತ್ತು ರಾಜಕೀಯ ಸಂಬಂಧದ ಬಗ್ಗೆ ಮಾತನಾಡಿದ ಅವರು, “ಮಾಧ್ಯಮ ಎಂದರೆ ನನಗೆ ಸ್ವಲ್ಪ ಅಲರ್ಜಿ ಇದ್ದರೂ, ನೀವು ನನ್ನನ್ನು ಬಿಡುವುದಿಲ್ಲ, ನಾನೂ ನಿಮ್ಮನ್ನು ಬಿಡುವುದಿಲ್ಲ” ಎಂದು ಹಾಸ್ಯವಾಗಿ ಹೇಳಿದರು. ಪ್ರಶಸ್ತಿಗಳ ಜತೆಗೆ ಜವಾಬ್ದಾರಿಯೂ ಹೆಚ್ಚುತ್ತದೆ ಎಂದರು.

ಪ್ರಶಸ್ತಿ ಪುರಸ್ಕೃತರಲ್ಲಿ ಮಹಿಳೆಯರ ಕೊರತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಮಾಜ ಸೇವೆ ಮಾಡಿದ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂದರು. ಶೀಘ್ರದಲ್ಲೇ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಬರಲಿದೆ ಎಂದರು. ಮಾಧ್ಯಮಗಳು ಎಐಯಿಂದ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೂಡ ಎಚ್ಚರಿಕೆ ನೀಡಿದರು.

Trending

Exit mobile version