ಬೆಂಗಳೂರು
ಆರ್‌ಎಸ್‌ಎಸ್ ಗೀತೆ ಗಾಯನದಿಂದ ಡಿಕೆಶಿ ಸದ್ದು – ಕಾಂಗ್ರೆಸ್ ಒಳಗೆ ಭಿನ್ನಮತ?
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರ್‌ಎಸ್‌ಎಸ್ ಸಂಘದ ಗೀತೆ ʻನಮಸ್ತೇ ಸದಾ ವತ್ಸಲೇ ಮಾತೃಭೂಮೇʼ ಹಾಡಿದ ಘಟನೆಯು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಗಸ್ಟ್ 21ರಂದು ನಡೆದಿದ್ದ ವಿಧಾನಸಭಾ ಚರ್ಚೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರ ಟಾಂಗ್‌ಗೆ ತಕ್ಷಣ ಪ್ರತಿಕ್ರಿಯಿಸಿದ ಡಿಕೆಶಿ, ಆರ್‌ಎಸ್‌ಎಸ್ ಗೀತೆ ಹಾಡುವ ಮೂಲಕ ಸೂಕ್ಷ್ಮ ರಾಜಕೀಯ ಸಂದೇಶವನ್ನೂ ನೀಡಿದ್ದಾರೆ.
ಚರ್ಚೆ ನಡೆಯುತ್ತಿದ್ದಾಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉತ್ತರಿಸುತ್ತಿದ್ದರು. ಈ ವೇಳೆ ಆರ್. ಅಶೋಕ್ ಅವರು, ಡಿಕೆಶಿ ಅವರು RCB ಗೆಲುವಿನಲ್ಲಿ ಭಾಗವಹಿಸಿದ್ದುದನ್ನು ಪ್ರಸ್ತಾಪಿಸಿದರು. ಪ್ರತಿಯಾಗಿ ಡಿಕೆಶಿ ಅವರು, “ನಾನು ಕ್ರಿಕೆಟ್ ಅಭಿಮಾನಿ, ಕ್ರೀಡಾಂಗಣಕ್ಕೂ ಹೋದಿದ್ದೆ, ಕಪ್‍ಗೂ ಮುತ್ತು ಕೊಟ್ಟಿದ್ದೆ” ಎಂದರು. ಆದರೆ ಅಶೋಕ್ ಟಾಂಗ್ ನೀಡಿದಂತೆ, “ಆರ್‌ಎಸ್‌ಎಸ್ ಚಡ್ಡಿ ಹಾಕಿದ್ರಲ್ಲ” ಎಂದರು.
ಇದಕ್ಕೆ ತಕ್ಷಣವೇ ಪ್ರತಿಸ್ಪಂದಿಸಿದ ಡಿಕೆಶಿ, ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಗೀತೆ ಹಾಡಿ, “ಇದೀಗ ಅದರೆಲ್ಲ ಚರ್ಚೆ ಬೇಡ” ಎಂದು ಪ್ರತಿಕ್ರಿಯಿಸಿದರು. ಈ ಘಟನೆ ಇದೀಗ ಹೊಸ ರಾಜಕೀಯ ಸಂವೇದನೆ ಹುಟ್ಟಿಸಿದೆ.
ಬಿಜೆಪಿಯಿಂದ ತೀವ್ರ ಪ್ರತಿಕ್ರಿಯೆ:
ಈ ವಿಡಿಯೋವನ್ನು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, “ಕಾಂಗ್ರೆಸ್ ನಾಯಕರೇ ಆರ್‌ಎಸ್‌ಎಸ್ ಅನ್ನು ಗೌರವಿಸುತ್ತಿದ್ದಾರೆ. ಗಾಂಧಿ ಕುಟುಂಬವನ್ನಷ್ಟೆ ಬಿಟ್ಟರೆ ದೇಶದ 140 ಕೋಟಿ ಜನ ಆರ್‌ಎಸ್‌ಎಸ್ ಗೆ ಗೌರವವಿದೆ” ಎಂದು ಬರೆದುಕೊಂಡಿದ್ದಾರೆ.
ಇದರಿಂದಾಗಿ ಕಾಂಗ್ರೆಸ್ ಒಳಗಲ್ಲಿಯೂ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಡಿಕೆಶಿಯ ಈ ನಡೆ ರಾಜಕೀಯವಾಗಿ ಹಲವು ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ.