ದೇಶ
ಹೈಕಮಾಂಡ್ ತೀರ್ಮಾನಕ್ಕೆ ಕಾಯುತ್ತಿರುವ ಡಿಕೆ ಶಿವಕುಮಾರ್: ಡಿಕೆ ಸುರೇಶ್
ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವ ಸ್ಥಾನವಲ್ಲ. ನಮ್ಮಣ್ಣ ಡಿ.ಕೆ. ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಅವರು ಖಂಡಿತ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರ ಸಹನೆ, ಪಕ್ಷನಿಷ್ಠೆ ಹಾಗೂ ಶಿಸ್ತಿನ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಕಾಯುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಸುರೇಶ್, ಪಕ್ಷ ಈಗಾಗಲೇ “ತಾಳ್ಮೆಯಿಂದಿರಿ” ಎಂದು ಸೂಚನೆ ನೀಡಿದೆ. ರಾಹುಲ್ ಗಾಂಧಿ ಕೂಡ ಮೈಸೂರಿನಲ್ಲಿ ಭೇಟಿಯಾದ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಪಕ್ಷದ ಶಿಸ್ತಿನ ಸಿಪಾಯಿ. ಶಾಸಕರ ಹಾಗೂ ಪಕ್ಷದ ಹಿತದೃಷ್ಟಿಯಿಂದ ಎಲ್ಲ 140 ಶಾಸಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಗುರಿಯೊಂದಿಗೆ ತಾಳ್ಮೆಯಿಂದ ಕಾಯುತ್ತಿದ್ದಾರೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ತಾಳ್ಮೆಗೆ ಡೆಡ್‌ಲೈನ್ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಸುರೇಶ್, ಅಧಿಕಾರ ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ಮುಖ್ಯಮಂತ್ರಿ ಹುದ್ದೆ ಅಷ್ಟು ಸುಲಭವಾದದ್ದಲ್ಲ. ಎಲ್ಲರೂ ಸೇರಿ ಈ ಪ್ರಕ್ರಿಯೆಯ ಭಾಗವಾಗಬೇಕು. ನಾನು ಮೊದಲೇ ಹೇಳಿದ್ದೇನೆ, ಈಗಲೂ ಹೇಳುತ್ತೇನೆ – ನಮ್ಮಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದರು.
ಮುಂದುವರೆದು ಮಾತನಾಡಿದ ಅವರು, ಪಕ್ಷದ ಪ್ರಮುಖ ಗುರಿ 2028ರ ವಿಧಾನಸಭಾ ಚುನಾವಣೆ. ಆ ಚುನಾವಣೆಯನ್ನು ಕಾಂಗ್ರೆಸ್ ಒಗ್ಗಟ್ಟಾಗಿ ಎದುರಿಸಬೇಕು. ಶಾಸಕರು, ಕಾರ್ಯಕರ್ತರು ಹಾಗೂ ಪಕ್ಷದ ಹಿತದೃಷ್ಟಿಯಿಂದ ಪ್ರತಿಯೊಂದು ವಿಷಯವನ್ನೂ ಸಹನೆ ಹಾಗೂ ಶಿಸ್ತಿನಿಂದ ನೋಡಬೇಕಾಗಿದೆ ಎಂದು ಹೇಳಿದರು. ಡಿಕೆ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿರುವ ಕಾರಣ ಮೊದಲಿಗೆ ಶಿಸ್ತನ್ನು ಪಾಲಿಸುತ್ತಿದ್ದಾರೆ ಎಂದರು.
ತುರ್ತು ಅಧಿವೇಶನದ ಬಳಿಕ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ ಡಿಕೆ ಸುರೇಶ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುವುದನ್ನು ಸ್ವಾಗತಿಸುತ್ತೇನೆ. ಅವರಿಗೆ ಅವರ ಪಕ್ಷ, ನಮಗೆ ನಮ್ಮ ಪಕ್ಷ – ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿದೆ ಎಂದು ಹೇಳಿದರು.