ದೇಶ
‘ನನ್ನ ಹತ್ಯೆಗೆ ಇರಾನ್ ಸಂಚು’; ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಜು.8: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ತಮ್ಮ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದು ಹೇಳುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಟರ್ಕಿಯಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇರಾನ್ ನನ್ನನ್ನು ಕೊಲ್ಲಲು ಬಯಸಿದೆ. ಅವರ ಪ್ರತಿಯೊಂದು ಹಿಟ್‌ಲಿಸ್ಟ್‌ನಲ್ಲೂ ನನ್ನ ಹೆಸರಿದೆ. ಇಲ್ಲಿಯವರೆಗೆ ನಾನು ಅದೃಷ್ಟವಂತನಾಗಿದ್ದೇನೆ. ಆದರೆ ಆ ಅದೃಷ್ಟ ಎಷ್ಟು ದಿನ ಇರುತ್ತದೆ ಎಂಬುದು ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಇರಾನ್‌ನೊಂದಿಗಿನ ಮಧ್ಯಂತರ ತಿಳಿವಳಿಕೆ ಒಪ್ಪಂದ (MoU) ಅಂತ್ಯಗೊಂಡಿದೆ ಎಂದು ಟ್ರಂಪ್ ಘೋಷಿಸಿದ್ದರು. ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳು ಯಾವುದೇ ಫಲ ನೀಡಿಲ್ಲ ಎಂದು ಆರೋಪಿಸಿದ ಅವರು, “ಇರಾನ್ ಜೊತೆ ಮಾತನಾಡಿ ಸಾಕಷ್ಟು ಸಮಯ ವ್ಯರ್ಥವಾಗಿದೆ. ನನ್ನ ದೃಷ್ಟಿಯಲ್ಲಿ ಕದನ ವಿರಾಮ ಮತ್ತು ಒಪ್ಪಂದ ಈಗ ಮುಗಿದ ಅಧ್ಯಾಯ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಇತ್ತೀಚೆಗೆ ಹತ್ಯೆಗೀಡಾದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಪ್ರಚೋದನಕಾರಿ ಘೋಷಣೆಗಳು ಕೇಳಿಬಂದಿರುವ ವರದಿಗಳೂ ಗಮನ ಸೆಳೆದಿವೆ. ಕೆಲವು ಪೋಸ್ಟರ್‌ಗಳು ಮತ್ತು ಭಾಷಣಗಳಲ್ಲಿ ಅವರ ವಿರುದ್ಧ ಹಿಂಸಾತ್ಮಕ ಕರೆಗಳು ನೀಡಲಾಗಿದೆ ಎನ್ನಲಾಗಿದೆ.
ಈ ಬೆಳವಣಿಗೆಗಳು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇತ್ತೀಚೆಗೆ ಅಮೆರಿಕವು ಇರಾನ್‌ನ ಹಲವು ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿದ ಬಳಿಕ ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ.