ಕ್ರೀಡೆ
ಈಜಿಪ್ಟ್‌ಗೆ ಐತಿಹಾಸಿಕ ಜಯ: 92 ವರ್ಷಗಳ ಕನಸು ನನಸು, ನ್ಯೂಜಿಲ್ಯಾಂಡ್‌ಗೆ ಸೋಲು; ಸ್ಪೇನ್‌ನಿಂದ ಸೌದಿ ಅರೇಬಿಯಾಗೆ 4-0 ಪಾಠ
ಮಿಯಾಮಿ, ಜೂ.22: ಫಿಫಾ ವಿಶ್ವಕಪ್ 2026ರಲ್ಲಿ ಈಜಿಪ್ಟ್ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, 1934ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ 92 ವರ್ಷಗಳ ಬಳಿಕ ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಜಯದ ಸಿಹಿ ಅನುಭವಿಸಿದೆ. ವ್ಯಾಂಕೋವರ್‌ನಲ್ಲಿ ನಡೆದ ‘ಜಿ’ ಗುಂಪಿನ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿ ವಿಶ್ವ ಫುಟ್‌ಬಾಲ್ ವೇದಿಕೆಯಲ್ಲಿ ಹೊಸ ಇತಿಹಾಸ ಬರೆದಿದೆ.
ಈ ಮಹತ್ವದ ಗೆಲುವಿನೊಂದಿಗೆ ಈಜಿಪ್ಟ್ ಗ್ರೂಪ್ ‘ಜಿ’ಯಲ್ಲಿ ಅಗ್ರಸ್ಥಾನಕ್ಕೇರಿದ್ದು, ನಾಕೌಟ್ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಬಲಪಡಿಸಿಕೊಂಡಿದೆ. ತಂಡದ ನಾಯಕ ಮೊಹಮ್ಮದ್ ಸಲಾಹ್ ಅವರ ಅದ್ಭುತ ಆಟ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಫರೋಸ್ ಪರ ಮೊದಲ ಗೋಲು ದಾಖಲಾಗಿದ್ದು, ನಂತರ ಮೊಸ್ತಫಾ ಜಿಕೊ ಮತ್ತು ಸಲಾಹ್ ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.
ಮೊದಲ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿದ್ದ ಈಜಿಪ್ಟ್, ಇದೀಗ ವಿಶ್ವಕಪ್‌ನಲ್ಲಿ ತನ್ನ ಮೊದಲ ಜಯ ದಾಖಲಿಸಿ ಅಭಿಮಾನಿಗಳ ಕನಸನ್ನು ನನಸುಗೊಳಿಸಿದೆ. ತಂಡ ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಇರಾನ್ ವಿರುದ್ಧ ಸೆಣಸಲಿದೆ.
ಇನ್ನು ‘ಎಚ್’ ಗುಂಪಿನ ಪಂದ್ಯದಲ್ಲಿ ಸ್ಪೇನ್ ತಂಡ ಸೌದಿ ಅರೇಬಿಯಾವನ್ನು 4-0 ಗೋಲುಗಳ ಅಂತರದಿಂದ ಮಣಿಸಿ ಭರ್ಜರಿ ಪ್ರದರ್ಶನ ನೀಡಿತು. ಲ್ಯಾಮಿನೆ ಯಮಲ್ 10ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಮೈಕೆಲ್ ಒಯರ್ಜಾಬಲ್ 21ನೇ ಹಾಗೂ 24ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿದರು. ಸೌದಿ ತಂಡದ ಹಸನ್ ಅಲ್-ತಂಬಕ್ತಿ ಅವರ ಸ್ವಯಂ ಗೋಲು ಸ್ಪೇನ್‌ಗೆ ಮತ್ತೊಂದು ಮುನ್ನಡೆ ನೀಡಿತು.
ಮತ್ತೊಂದೆಡೆ, ಬೆಲ್ಜಿಯಂ-ಇರಾನ್ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಉರುಗ್ವೆ ಹಾಗೂ ಕೇಪ್ ವೆರ್ದೆ ನಡುವಿನ ರೋಚಕ ಹಣಾಹಣಿಯೂ 2-2 ಗೋಲುಗಳ ಸಮಬಲದಲ್ಲಿ ಮುಕ್ತಾಯವಾಯಿತು.