ದೇಶ
STATE NEWS ಸದನದ ಬಾವಿಯಲ್ಲಿ ಧರಣಿ, ಪೋಸ್ಟರ್ ಪ್ರದರ್ಶನ
ಬೆಂಗಳೂರು: “ರಾಷ್ಟ್ರೀಯ ಕಾಂಗ್ರೆಸ್ (AICC) ಪಕ್ಷಕ್ಕೆ ಕರ್ನಾಟಕವೇ ಆರ್‌ಬಿಐ ಆಗಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಾವಿರ ಸಾವಿರ ಕೋಟಿ ರೂಪಾಯಿ ಕೇಂದ್ರ ಕಾಂಗ್ರೆಸ್‌ಗೆ ಹೋಗುತ್ತಿದೆ” ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಗಂಭೀರ ಆರೋಪ ಮಾಡಿದ್ದಾರೆ.
ಅಬಕಾರಿ ಇಲಾಖೆ ಅವ್ಯವಹಾರ (Excise Department Corruption) ವಿರೋಧಿಸಿ ಬಿಜೆಪಿ–ಜೆಡಿಎಸ್ ‘ದೋಸ್ತಿ ಸಮರ’ ಘೋಷಿಸಿದ್ದು, ವಿಧಾನಸಭೆ ಸದನದಲ್ಲಿ ಅಹೋರಾತ್ರಿ ಧರಣಿ ಮುಂದುವರಿದಿದೆ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ನಾಯಕರು ಸದನದೊಳಗೆಲೇ ಧರಣಿಗಿಳಿದಿದ್ದಾರೆ. ಸದನ ಮುಂದೂಡಿದರೂ ಹೊರಗೆ ಬರದೇ, ಪೋಸ್ಟರ್ ಹಿಡಿದು ಸದನದ ಬಾವಿಯಲ್ಲೇ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಕುರಿತು hosasuddi.in ಜೊತೆ ಮಾತನಾಡಿದ ವಿಪಕ್ಷ ನಾಯಕರು, “ರಾಜ್ಯದಲ್ಲಿ ಲೂಟಿ ಸರ್ಕಾರ ಇದೆ. ರಾಜ್ಯ ಕಾಂಗ್ರೆಸ್, ಕೇಂದ್ರ ಕಾಂಗ್ರೆಸ್‌ನ ರಿಸರ್ವ್ ಬ್ಯಾಂಕ್ ಆಗಿದೆ” ಎಂದು ಕಿಡಿಕಾರಿದರು. ಸದ್ಯದಲ್ಲೇ ಸಚಿವ ಸಂಪುಟ ಪುನರ್‌ರಚನೆ ನಡೆಯಲಿದ್ದು, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಅಬಕಾರಿ ಇಲಾಖೆಯಿಂದ ಸಾವಿರಾರು ಕೋಟಿ ರೂಪಾಯಿ ದೆಹಲಿಗೆ ಹರಿಯುತ್ತಿದೆ ಎಂದು ಆರೋಪಿಸಿದರು.
“ನಾವು ಬಿಡಲ್ಲ. ಅಬಕಾರಿ ಇಲಾಖೆಯ 6 ಸಾವಿರ ಕೋಟಿ ರೂಪಾಯಿ ವಾಪಸ್ ಬರಬೇಕು. ಸಚಿವ ತಿಮ್ಮಾಪೂರ ರಾಜೀನಾಮೆ ಕೊಡಲೇಬೇಕು. ನಮ್ಮ ಸರ್ಕಾರದಲ್ಲಿ ಈ ಹಿಂದೆ ಇಂಥ ಆರೋಪ ಬಂದಾಗ, ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದರು. ತಪ್ಪಿಲ್ಲವೆಂದು ಸಾಬೀತಾದ ಬಳಿಕ ಮತ್ತೆ ಸಚಿವ ಸ್ಥಾನ ಪಡೆದಿದ್ದರು. ಈಗಲೂ ಅದೇ ಮಾದರಿ ಅನುಸರಿಸಲಿ. ಇಲ್ಲದಿದ್ದರೆ ತಿಮ್ಮಾಪೂರ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು” ಎಂದು ಆರ್.ಅಶೋಕ್ ಪಟ್ಟು ಹಿಡಿದರು.
ಇನ್ನೊಂದೆಡೆ ಜೆಡಿಎಸ್ ಶಾಸಕ ಸುರೇಶ್ ಬಾಬು ಮಾತನಾಡಿ, “ದಾಖಲೆ ಸಮೇತ ಆರೋಪ ಮಂಡಿಸಿದರೂ ಸರ್ಕಾರ ಒಪ್ಪುತ್ತಿಲ್ಲ. ಮುಖ್ಯಮಂತ್ರಿ ಹಿಂದಿನಂತೆ ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ಬಿಜೆಪಿ–ಜೆಡಿಎಸ್ ಹೋರಾಟ ನಿಲ್ಲಲ್ಲ” ಎಂದು ಸ್ಪಷ್ಟಪಡಿಸಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಅನುಪಸ್ಥಿತಿ ಕಾಡುತ್ತಿದೆ. ಅವರು ಇದ್ದಿದ್ದರೆ ವಿಚಾರವನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದಿತ್ತು ಎಂದರು.