ಸರ್ಕಾರಿ ಶಾಲೆ ದಾಖಲಾತಿಗೆ ವಿದೇಶ ಪ್ರವಾಸ ಆಫರ್: ಇಲಾಖೆಯ ಹೊಸ ತಂತ್ರ | Hosa Suddi

ದೇಶ

ಸರ್ಕಾರಿ ಶಾಲೆ ದಾಖಲಾತಿಗೆ ವಿದೇಶ ಪ್ರವಾಸ ಆಫರ್: ಇಲಾಖೆಯ ಹೊಸ ತಂತ್ರ

Published

on

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ವಿಶೇಷ ಪ್ರೋತ್ಸಾಹ ಕ್ರಮ ಕೈಗೊಂಡಿದ್ದು, ದಾಖಲಾತಿ ಹೆಚ್ಚಿಸಿದ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ವಿದೇಶ ಅಧ್ಯಯನ ಪ್ರವಾಸದ ಆಫರ್‌ ನೀಡಿದೆ. DDPI, BEO, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಈ ಅವಕಾಶ ಲಭ್ಯವಾಗಲಿದೆ.

ಶಿಕ್ಷಣ ಇಲಾಖೆ 2026-27ನೇ ಸಾಲಿನ ದಾಖಲಾತಿ ಅಭಿಯಾನವನ್ನು ಈಗಾಗಲೇ ಆರಂಭಿಸಿದ್ದು, ಕರ್ನಾಟಕ ಪಬ್ಲಿಕ್ ಶಾಲೆ (KPS) ಹಾಗೂ ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಪ್ರತಿ ವರ್ಷ ಹೋಲಿಕೆ ಮಾಡಿದಾಗ ಹೆಚ್ಚಿಸಿದವರಿಗೆ ಈ ಸೌಲಭ್ಯ ಅನ್ವಯಿಸುತ್ತದೆ. ಅಧ್ಯಯನ ಪ್ರವಾಸದ ಹೆಸರಿನಲ್ಲಿ ವಿದೇಶಕ್ಕೆ ಭೇಟಿ ನೀಡುವ ಅವಕಾಶವನ್ನು ಇಲಾಖೆ ನೀಡಿದ್ದು, ಇದರಿಂದ ಸರ್ಕಾರಿ ಶಾಲೆಗಳ ಕಡೆ ಸಾರ್ವಜನಿಕರ ವಿಶ್ವಾಸ ಹೆಚ್ಚಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

2026-27ನೇ ಸಾಲಿನಲ್ಲಿ ಕೆಪಿಎಸ್‌ಗಳಿಗೆ ಕನಿಷ್ಠ 25% ಹಾಗೂ ಉಳಿದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ 15% ದಾಖಲೆ ಹೆಚ್ಚಿಸುವ ಗುರಿಯನ್ನು ನಿಗದಿ ಮಾಡಲಾಗಿದೆ. ಈ ಗುರಿಯನ್ನು ಮೀರಿಸಿದ ಅಧಿಕಾರಿಗಳು ಹಾಗೂ ಶಿಕ್ಷಕರಲ್ಲಿ ತಲಾ ಐವರು ವಿದೇಶ ಅಧ್ಯಯನ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರೆ.

ಸರ್ಕಾರಿ ಶಾಲೆಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ದಾಖಲಾತಿ ಅಭಿಯಾನ ಬಲಪಡಿಸಲು ಪ್ರತಿ ಜಿಲ್ಲೆಯಲ್ಲಿ ರಾಯಭಾರಿಗಳನ್ನು ನೇಮಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಕ್ರಮಗಳಿಂದ ಸರ್ಕಾರಿ ಶಾಲೆಗಳ ಸ್ಪರ್ಧಾತ್ಮಕತೆ ಹಾಗೂ ಗುಣಮಟ್ಟ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

Trending

Exit mobile version