ಗದಗ ಬಾಲಕನ ಪತ್ರ ಸಂಚಲನ: PM ಮೋದಿ ಅವರ ಗಮನಕ್ಕೆ ಶಿವಾಜಿ ನಗರದ ದುಸ್ಥಿತಿ | Hosa Suddi

ದೇಶ

ಗದಗ ಬಾಲಕನ ಪತ್ರ ಸಂಚಲನ: PM ಮೋದಿ ಅವರ ಗಮನಕ್ಕೆ ಶಿವಾಜಿ ನಗರದ ದುಸ್ಥಿತಿ

Published

on

ಗದಗ: ಗದಗ-ಬೆಟಗೇರಿ ಪಟ್ಟಣದ ಶಿವಾಜಿ ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಜನರನ್ನು ತೀವ್ರ ತೊಂದರೆಗೊಳಿಸುತ್ತಿರುವ ಸಂದರ್ಭದಲ್ಲಿ, 14 ವರ್ಷದ ಬಾಲಕನೊಬ್ಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದು ತಮ್ಮ ಪ್ರದೇಶದ ದುಸ್ಥಿತಿಯನ್ನು ತಿಳಿಸಿರುವ ಘಟನೆ ಗಮನ ಸೆಳೆದಿದೆ. ಸೆಂಟ್ ಜೋನ್ಸ್ ಶಾಲೆಯ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಸಾಯಿನಾಥ ಕಾಮಾರ್ತಿ ಎಂಬ ಹುಡುಗ, ರಸ್ತೆಯ ಹಾಳಾಗಿರುವ ಸ್ಥಿತಿ, ಮಳೆಗಾಲದಲ್ಲಿ ಸಂಚರಿಸಲು ಆಗದ ಪರಿಸ್ಥಿತಿ ಹಾಗೂ ನೀರಿನ ಕೊರತೆ ಕುರಿತು ಪತ್ರದಲ್ಲಿ ವಿವರಿಸಿದ್ದಾರೆ.

ಶಿವಾಜಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮಳೆ ಬಂದಾಗ ಕಾದುಕುಳಿತ ರೀತಿ ಜನರಿಗೆ ಸಂಚಾರ ಸಾಧ್ಯವಾಗುತ್ತಿಲ್ಲ ಎಂದು ಬಾಲಕ ಪತ್ರದಲ್ಲಿ ತಿಳಿಸಿದ್ದಾರೆ. ಆಟವಾಡಲು ಕೂಡ ಸ್ಥಳವಿಲ್ಲದ ಮಟ್ಟಿಗೆ ರಸ್ತೆಗಳು ಹದಗೆಟ್ಟಿದ್ದು, ಮಳೆಗಾಲದಲ್ಲಿ ಸಾರ್ವಜನಿಕರು ಜಾರಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ ಎಂದು ಅವರು ಬರೆದಿದ್ದಾರೆ.

ಇದಲ್ಲದೆ ಕುಡಿಯುವ ನೀರಿನ ತೊಂದರೆ ತೀವ್ರವಾಗಿದ್ದು, ಜನರು ದೂರದ ಪ್ರದೇಶಗಳಿಗೆ ತೆರಳಿ ನೀರು ತರುವಂತಾದ ಸ್ಥಿತಿ ಎಂದು ಸಾಯಿನಾಥ ಹೇಳಿದ್ದಾರೆ. ಹಲವು ಬಾರಿ ನಗರಸಭೆ ಸದಸ್ಯ ರಾಘವೆಂದ್ರ ಯಳವತ್ತಿ ಅವರಿಗೆ ಮನವಿ ಮಾಡಿದರೂ ಸಮಸ್ಯೆ ಪರಿಹಾರವಾಗದ ಕಾರಣ, ಕೊನೆಯ ಪ್ರಯತ್ನವಾಗಿ ಪ್ರಧಾನಿಗೆ ಪತ್ರ ಬರೆಯಬೇಕಾಯಿತು ಎಂದು ಬಾಲಕ ಅಳಲಿದ್ದಾರೆ.

“ದಯವಿಟ್ಟು ಶಿವಾಜಿ ನಗರಕ್ಕೆ ಮೂಲಸೌಕರ್ಯ ಕಲ್ಪಿಸಲು ನಗರಸಭೆಗೆ ಸೂಚಿಸಬೇಕು, ಸಾರ್ವಜನಿಕರು ಸುಖವಾಗಿರಲು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಸಾಯಿನಾಥ ಪ್ರಧಾನಿಗೆ ಮನವಿ ಮಾಡಿಕೊಂಡಿದ್ದಾರೆ. ಬಾಲಕನ ಈ ನೇರ ಮನವಿ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

Trending

Exit mobile version