ಗೋವದಲ್ಲಿ ಜಗತ್ತಿನ ಎತ್ತರದ ಶ್ರೀರಾಮ ಮೂರ್ತಿ ಲೋಕಾರ್ಪಣೆ – ಇಂದು ಪ್ರಧಾನಿ ಮೋದಿ ಅನಾವರಣ | Hosa Suddi

ದೇಶ

ಗೋವದಲ್ಲಿ ಜಗತ್ತಿನ ಎತ್ತರದ ಶ್ರೀರಾಮ ಮೂರ್ತಿ ಲೋಕಾರ್ಪಣೆ – ಇಂದು ಪ್ರಧಾನಿ ಮೋದಿ ಅನಾವರಣ

Published

on

ಪಣಜಿ: ಗೋವಾದ ಕಾಣಕೋಣದಲ್ಲಿರುವ ಜಗತ್ತಿನ ಅತೀ ಎತ್ತರದ ಶ್ರೀರಾಮನ ಮೂರ್ತಿಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ದಕ್ಷಿಣ ಅಯೋಧ್ಯೆಯಾಗಿ ರೂಪುಗೊಳ್ಳುತ್ತಿರುವ ಪರ್ತಗಾಳಿ ಜೀವೋತ್ತಮ ಮಠದ ಬಿಲ್ಲಿನಾಕಾರದ ಆದರ್ಶ ಧಾಮ್ ಆವರಣದಲ್ಲಿ ನಿರ್ಮಿಸಲಾದ 77 ಅಡಿ ಎತ್ತರದ ಕಂಚಿನ ಶ್ರೀರಾಮ ಮೂರ್ತಿಯನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ.

ಈ ಮೂರ್ತಿಯನ್ನು ಗುಜರಾತ್‌ನ ಸರ್ದಾರ್ ಪಟೇಲ್ ಮತ್ತು ಬೆಂಗಳೂರಿನ ಕೆಂಪೇಗೌಡರ ಮೂರ್ತಿಗಳನ್ನು ವಿನ್ಯಾಸಗೊಳಿಸಿದ ಪ್ರಸಿದ್ಧ ಶಿಲ್ಪಿ, `ಪದ್ಮಭೂಷಣ’ ಪುರಸ್ಕೃತ ರಾಮ ಸುತಾರ್ ರವರು ರಚಿಸಿದ್ದಾರೆ.

550ನೇ ಸಂವತ್ಸರ – ಅಂಚೆ ಚೀಟಿ, ನಾಣ್ಯ ಬಿಡುಗಡೆ

ಶ್ರೀಮಠಕ್ಕೆ 550 ಸಂವತ್ಸರಗಳು ಪೂರ್ತಿಯಾದ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಾರ್ಧ ಪಂಚ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ಮೋದಿ ವಿಶೇಷ ಅಂಚೆ ಚೀಟಿ ಹಾಗೂ ಸ್ಮಾರಕ ನಾಣ್ಯವನ್ನು ಬಿಡುಗಡೆಗೊಳಿಸಲಿದ್ದಾರೆ. ಇದರ ಜೊತೆ:

  • ರಾಮಾಯಣ ಥೀಮ್ ಪಾರ್ಕ್
  • ಶ್ರೀರಾಮನ ಮಹಿಮೆ ಚಿತ್ರಿಸುವ ಮ್ಯೂಸಿಯಂ
  • 7ಡಿ ರಂಗಮಂದಿರ

ಇವಕ್ಕೂ ಮೋದಿಯವರು ಚಾಲನೆ ನೀಡಲಿದ್ದಾರೆ.

ದೇಶದಾದ್ಯಂತ 550 ಕೋಟಿ ಶ್ರೀರಾಮ ನಾಮ ಜಪ ಅಭಿಯಾನ

550ನೇ ಸಂವತ್ಸರಾಚರಣೆಯ ಅಂಗವಾಗಿ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದರು ದೇಶದ 120 ಕೇಂದ್ರಗಳಲ್ಲಿ 550 ಕೋಟಿ ಶ್ರೀರಾಮ ನಾಮ ಜಪ ಅಭಿಯಾನವನ್ನು ಆರಂಭಿಸಿದ್ದರು. ಆದರೆ ಈ ಅಭಿಯಾನದಲ್ಲಿ 590 ಕೋಟಿಗೂ ಹೆಚ್ಚು ಜಪ ನಡೆದಿದ್ದು ಐತಿಹಾಸಿಕ ದಾಖಲೆ ನಿರ್ಮಿಸಲಾಗಿದೆ.

ಇದೇ ಸಂದರ್ಭ 40 ದಿನಗಳ ಕಾಲ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಂಚರಿಸಿದ ಶ್ರೀರಾಮ ದಿಗ್ವಿಜಯ ರಥಯಾತ್ರೆ ಪರ್ತಗಾಳಿ ಮಠವನ್ನು ತಲುಪಿದೆ. ಈಗ ನಡೆಯುತ್ತಿರುವ ಹನ್ನೊಂದು ದಿನಗಳ ಆಚರಣೆಯಲ್ಲಿ ಪ್ರತಿದಿನ 55 ಹೋಮ–ಹವನಗಳು, ಒಟ್ಟು 550 ಹೋಮಗಳು ನಡೆಯುತ್ತಿವೆ.

ಉಡುಪಿ ನಂತರ ಗೋವಿಗೆ ಪ್ರಧಾನಿ

ಉಡುಪಿ ಶ್ರೀಕೃಷ್ಣ ಭೇಟಿ ಕಾರ್ಯಕ್ರಮ ಪೂರೈಸಿದ ನಂತರ ಪ್ರಧಾನಿ ಮೋದಿ ಗೋವಾಕ್ಕೆ ತೆರಳಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Trending

Exit mobile version