ದೇಶ
GRUHA LAXMI SCHEME : ಗೃಹಲಕ್ಷ್ಮೀ ಯೋಜನೆ: 20 ಸಾವಿರ ಮಹಿಳೆಯರ ಸಮಸ್ಯೆ ಇತ್ಯರ್ಥ
ಬೆಂಗಳೂರು: ಜಿಎಸ್‍ಟಿ ಹಾಗೂ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂಬ ಕಾರಣಕ್ಕೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೆ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯರ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಶೇಷ ಅಧಿವೇಶನದ ವೇಳೆ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಪಿ.ಎಚ್. ಪೂಜಾರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಜಿಎಸ್‍ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂಬ ದಾಖಲೆಗಳ ಕಾರಣದಿಂದ ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ತಡೆಯಲ್ಪಟ್ಟಿತ್ತು ಎಂದು ಹೇಳಿದರು. ಈ ಪೈಕಿ 20 ಸಾವಿರ ಮಹಿಳೆಯರ ಸಮಸ್ಯೆ ಪರಿಹಾರಗೊಂಡಿದ್ದು, ಉಳಿದವರ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಜಿಎಸ್‍ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಗಳಲ್ಲಿ ಈ ಮಹಿಳೆಯರು ತೆರಿಗೆ ಪಾವತಿದಾರರಾಗಿ ಕಾಣಿಸಿಕೊಂಡಿರುವುದೇ ಸಮಸ್ಯೆಗೆ ಮೂಲ ಕಾರಣ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿವರಿಸಿದರು. ಈ ಸಂಬಂಧ ಸರ್ಕಾರ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯಾವುದೇ ಲೋಪ ಇಲ್ಲ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 1.26 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಕೆಲವರು ಸಣ್ಣ ಪ್ರಮಾಣದ ವ್ಯಾಪಾರ ಅಥವಾ ವ್ಯವಹಾರ ನಡೆಸುವ ಸಂದರ್ಭ ಜಿಎಸ್‍ಟಿ ಅಥವಾ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀ ಯೋಜನೆಗಾಗಿ ರೂಪಿಸಿರುವ ಸಾಫ್ಟ್‌ವೇರ್‌ನಲ್ಲಿ ಜಿಎಸ್‍ಟಿ ಅಥವಾ ಆದಾಯ ತೆರಿಗೆ ಪಾವತಿ ಎಂಬ ದಾಖಲೆ ಕಾಣಿಸಿದರೆ, ಅದನ್ನು ತಕ್ಷಣ ತಿದ್ದುಪಡಿ ಮಾಡುವುದು ಸಾಧ್ಯವಿಲ್ಲ ಎಂದು ಸಚಿವೆ ಹೇಳಿದರು.
ಗೃಹಲಕ್ಷ್ಮೀ ಯೋಜನೆ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಈ ಸಮಸ್ಯೆಯನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆ ಹಾಗೂ ಜಿಎಸ್‍ಟಿ ಕೌನ್ಸಿಲ್ ಗಮನಕ್ಕೆ ತರಲಾಗಿದೆ. ಉಳಿದ ಫಲಾನುಭವಿಗಳ ಸಮಸ್ಯೆಯೂ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದರು.