ದೇಶ

ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆಗೆ ಸಜ್ಜು

Published

on

ಮಂತ್ರಾಲಯದ ರಾಯರ ಮಠದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಕೊನೆಯ ಹಂತವಾದ ಉತ್ತರಾರಾಧನೆ ಭಕ್ತಿಭಾವದಿಂದ ನಡೆಯಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಆಗಸ್ಟ್ 12) ಮಠದ ರಾಜಬೀದಿಯಲ್ಲಿ ಭವ್ಯ ಮಹಾರಥೋತ್ಸವ ಜರುಗಲಿದೆ.

ಕಲಿಯುಗದ ಕಾಮಧೇನು ಎಂದು ಕರೆಯಲ್ಪಡುವ ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನ ಪ್ರವೇಶಿಸಿದ ಮರುದಿನವನ್ನು ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಕ್ತರು ಇಂದು ರಾಯರನ್ನು ಪ್ರಹ್ಲಾದ ರಾಜರ ಉತ್ಸವಮೂರ್ತಿ ರೂಪದಲ್ಲಿ ರಾಜಬೀದಿಯಲ್ಲಿ ದರ್ಶನ ಮಾಡಬಹುದೆಂಬ ನಂಬಿಕೆಯಿದೆ.

ಹೈದರಾಬಾದ್ ಮೂಲದ ಭಕ್ತರಿಂದ ನೀಡಲಾದ ನವರತ್ನ ಕವಚವನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಗುರುರಾಯರಿಗೆ ಸಮರ್ಪಿಸಲಿದ್ದಾರೆ. ಮಹಾರಥೋತ್ಸವಕ್ಕೂ ಮುನ್ನ ರಾಮದೇವರು ಹಾಗೂ ಎಲ್ಲಾ ವೃಂದಾವನಗಳಿಗೆ ಗುಲಾಲ್ ಸಮರ್ಪಣೆ ಮಾಡಲಾಗುತ್ತಿದ್ದು, ವಸಂತೋತ್ಸವವನ್ನು ಉತ್ಸವಮೂರ್ತಿಯ ಮೆರವಣಿಗೆಯೊಂದಿಗೆ ಸಂಭ್ರಮಿಸಲಾಗುತ್ತದೆ.

ಉತ್ತರಾರಾಧನೆ ದಿನ ರಾಯರು ತಮ್ಮ ಕೃಪಾದೃಷ್ಟಿಯನ್ನು ಭಕ್ತರ ಕಡೆ ಹರಿಸುತ್ತಾರೆ ಎಂಬ ಭಕ್ತರ ನಂಬಿಕೆ ಹಿನ್ನೆಲೆಯಲ್ಲಿ, ಸಹಸ್ರಾರು ಮಂದಿ ಭಕ್ತರು ವಿವಿಧೆಡೆಯಿಂದ ಆಗಮಿಸಿ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಜನಾ ಮಂಡಳಿಗಳು, ಕಲಾತಂಡಗಳು ಹಾಗೂ ಹೆಲಿಕಾಪ್ಟರ್ ಮೂಲಕ ನಡೆಯುವ ಪುಷ್ಪವೃಷ್ಟಿ ರಥೋತ್ಸವಕ್ಕೆ ವಿಶೇಷ ಮೆರಗು ನೀಡಲಿದೆ.

ಈ ಮೂಲಕ ರಾಯರ ಆರಾಧನೆಯ ಪ್ರಮುಖ ಮೂರು ದಿನಗಳ ಮಹೋತ್ಸವಕ್ಕೆ ಭಕ್ತಿಪೂರ್ಣ ಅಂತ್ಯ ಸಿಗಲಿದೆ.

Trending

Exit mobile version