ದೇಶ
ಹಾಸನಾಂಬೆ ಉತ್ಸವ: ಜಿಲ್ಲಾಧಿಕಾರಿ ಕೆಎಸ್ ಲತಾ ಕುಮಾರಿ ಭಕ್ತರೊಂದಿಗೆ ಕೆಂಡ ಹಾಯ್ದು ಹರಕೆ ತೀರಿಸಿಕೊಂಡರು
ಹಾಸನ: ಹಾಸನಾಂಬೆ ದೇವಾಲಯದಲ್ಲಿ ನಡೆಯುತ್ತಿರುವ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದ ಸಂದರ್ಭದಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಭಕ್ತರ ಜೊತೆ ಕೆಂಡ ಹಾಯ್ದು ಹರಕೆ ತೀರಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಹಾಸನಾಂಬೆ ಉತ್ಸವದಲ್ಲಿ ಇಂದು ಕೊನೆಯ ದಿನ. ನಾನು ಹಿಂದೆ ಎಂದಿಗೂ ಕೆಂಡ ಹಾಯ್ದಿರಲಿಲ್ಲ, ಆದರೆ ಮಹಿಳೆಯರು ಕೆಂಡ ಹಾಯುತ್ತಿರುವುದು ನೋಡಿ ನನಗೂ ಹಾಯಿಸಲು ಮನಸ್ಸಾಯಿತು. ಭಕ್ತರ ಜೊತೆ ಸೇರಿ ಹರಕೆ ತೀರಿಸುತ್ತೇನೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಸಹ ಭಾಗಿಯಾಗಿದ್ದು, ಮಧ್ಯಾಹ್ನ 12 ಗಂಟೆಯ ನಂತರ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು ಎಂದು ಮಾಹಿತಿ ನೀಡಿದರು. ಕಳೆದ 13 ದಿನಗಳಿಂದ ಹಾಸನಾಂಬೆ ದರ್ಶನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಹರಿದು ಬಂದಿದ್ದು, ತಾಯಿ ದರ್ಶನ ಪಡೆದ ನಂತರ ಧನ್ಯರಾಗಿದ್ದಾರೆ.
ಹಾಸನಾಂಬೆ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪೂಜಾ ಕಾರ್ಯಗಳು, ಹೋಮ, ಕೆಂಡೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಉತ್ಸವದ ಕೊನೆಯ ದಿನ, ಕೆಂಡ ಹಾಯ್ದು ಹರಕೆ ತೀರಿಸುವುದು ವಿಶೇಷ ಆಕರ್ಷಣೆ ಆಗಿದ್ದು, ಸಾರ್ವಜನಿಕರಲ್ಲಿ ಉತ್ಸವದ ವೈಭವ ಮತ್ತು ಧಾರ್ಮಿಕ ಸಂಸ್ಕೃತಿಯ ಬಗ್ಗೆ ಉತ್ಸಾಹ ಹೆಚ್ಚಿಸಿದೆ.