ರಾಜ್ಯ
ರಾತ್ರಿ ಗ್ರಾಮಗಳಿಗೆ ಎಂಟ್ರಿ, ಹಗಲು ಕಾಫಿ ತೋಟದಲ್ಲಿ ವಾಸ! ಹಾಸನದಲ್ಲಿ Wild Elephant
ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಕಿತ್ತಾವರ ಗ್ರಾಮದ ಸುತ್ತಮುತ್ತ Wild Elephant ವೊಂದು ನಿರಂತರವಾಗಿ ದಾಂಧಲೆ ನಡೆಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಹಗಲಿನಲ್ಲಿ ಕಾಡು ಹಾಗೂ ಕಾಫಿ ತೋಟಗಳಲ್ಲಿ ವಿಶ್ರಾಂತಿ ಪಡೆಯುವ ಕಾಡಾನೆ, ರಾತ್ರಿ ವೇಳೆ ಗ್ರಾಮಗಳತ್ತ ನುಗ್ಗಿ ಜನರು ಹಾಗೂ ವಾಹನಗಳ ಮೇಲೆ ದಿಢೀರ್ ದಾಳಿ ನಡೆಸುತ್ತಿದೆ ಎನ್ನಲಾಗಿದೆ.
ರಾತ್ರಿ ವೇಳೆ ಗ್ರಾಮಗಳತ್ತ ಲಗ್ಗೆ
ಕಿತ್ತಾವರ ಗ್ರಾಮದ ಬಳಿ ಬೀಡುಬಿಟ್ಟಿರುವ ಈ ಕಾಡಾನೆ ಹಗಲು ಸಮಯದಲ್ಲಿ ಕಾಫಿ ಎಸ್ಟೇಟ್ಗಳಲ್ಲಿ ಅಡಗಿಕೊಂಡು ವಿಶ್ರಾಂತಿ ಪಡೆಯುತ್ತದೆ. ರಾತ್ರಿ ವೇಳೆ ರಸ್ತೆಗಳು ಮತ್ತು ಗ್ರಾಮಗಳತ್ತ ಬಂದು ಸಂಚರಿಸುವ ಜನರಿಗೆ ಹಾಗೂ ವಾಹನ ಸವಾರರಿಗೆ ಆತಂಕ ಉಂಟುಮಾಡುತ್ತಿದೆ.
ಯಾವುದೇ ಆನೆಗಳ ಗುಂಪಿನೊಂದಿಗೆ ಸೇರಿಕೊಳ್ಳದೆ ಒಂಟಿಯಾಗಿಯೇ ಸಂಚರಿಸುತ್ತಿರುವ ಈ ಸಲಗವನ್ನು ಪತ್ತೆಹಚ್ಚುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
ರೇಡಿಯೋ ಕಾಲರ್ ಇಲ್ಲದೆ ಪತ್ತೆಹಚ್ಚಲು ಕಷ್ಟ
ಕೆಲ ತಿಂಗಳ ಹಿಂದೆ ಈ ಕಾಡಾನೆಯನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಇದೀಗ ರೇಡಿಯೋ ಕಾಲರ್ ಇಲ್ಲದಿರುವ ಹಿನ್ನೆಲೆಯಲ್ಲಿ ಆನೆಯ ಚಲನವಲನ ಮತ್ತು ನಿಖರ ಸ್ಥಳವನ್ನು ಪತ್ತೆಹಚ್ಚಲು ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಸಿಬ್ಬಂದಿ ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಜನರಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ, ವಾಹನವನ್ನು ಎತ್ತಿ ಜಖಂಗೊಳಿಸಿತ್ತು. ಈ ಘಟನೆಯಿಂದ ಸ್ಥಳೀಯರಲ್ಲಿ ಭಯ ಮತ್ತಷ್ಟು ಹೆಚ್ಚಾಗಿದೆ.
ಧರ್ಮರಾಜು ಸಾವಿಗೂ ಇದೇ ಆನೆ ಕಾರಣ?
ಜುಲೈ 29ರಂದು ಧರ್ಮರಾಜು ಎಂಬುವವರು ಮೃತಪಟ್ಟ ಘಟನೆಗೂ ಇದೇ ಒಂಟಿ ಸಲಗ ಕಾರಣವಾಗಿರಬಹುದೆಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅಧಿಕೃತ ತನಿಖೆ ಮತ್ತು ಪರಿಶೀಲನೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ಸ್ಪಷ್ಟವಾಗಬೇಕಿದೆ.
ಸಲಗ ಸೆರೆ ಹಿಡಿಯಲು ಸ್ಥಳೀಯರ ಒತ್ತಾಯ
ಒಂಟಿ ಸಲಗನ ನಿರಂತರ ಹಾವಳಿಯಿಂದ ಕಿತ್ತಾವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಆತಂಕದಲ್ಲಿದ್ದಾರೆ. ರಾತ್ರಿ ವೇಳೆ ಅನಗತ್ಯವಾಗಿ ಹೊರಗೆ ಓಡಾಡದಂತೆ ಜನರು ಪರಸ್ಪರ ಎಚ್ಚರಿಕೆ ನೀಡುತ್ತಿದ್ದಾರೆ.
ಕಾಡಾನೆ ಮತ್ತಷ್ಟು ಅನಾಹುತ ಉಂಟುಮಾಡುವ ಮುನ್ನ ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ ಸಲಗವನ್ನು ಸೆರೆಹಿಡಿದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.