ಶುಕ್ರಿ ಕಾನ್ರಾಡ್ ವಿವಾದಕ್ಕೆ ಅನಿಲ್ ಕುಂಬ್ಳೆ ಗರಂ: “ಅಹಂಕಾರ ಬೇಡ!” | Hosa Suddi

ಕ್ರೀಡೆ

ಶುಕ್ರಿ ಕಾನ್ರಾಡ್ ವಿವಾದಕ್ಕೆ ಅನಿಲ್ ಕುಂಬ್ಳೆ ಗರಂ: “ಅಹಂಕಾರ ಬೇಡ!”

Published

on

ದಕ್ಷಿಣ ಆಫ್ರಿಕಾ ಕೋಚ್‌ ಶುಕ್ರಿ ಕಾನ್ರಾಡ್‌

ಗುಹವಾಟಿ, ನವೆಂಬರ್ 26: ಇಂಡಿಯಾ–ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಮೈದಾನಕ್ಕಿಂತ ಹೆಚ್ಚು ಸುದ್ದಿ ಮಾಡುತ್ತಿರುವುದು ಈಗ ಕೋಚ್‌ಗಳ ಹೇಳಿಕೆಗಳು. ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ ನೀಡಿದ ವಿವಾದಾತ್ಮಕ ಹೇಳಿಕೆಗೆ, ಭಾರತ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ತಿರುಗೇಟು ನೀಡಿದ್ದು, “ಗೆಲ್ಲುವ ಪರಿಸ್ಥಿತಿಯಲ್ಲಿ ಅಹಂಕಾರವಿರಬಾರದು” ಎಂದು ಕಟುವಾಗಿ ಹೇಳಿದ್ದಾರೆ.

ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಹೆಚ್ಚು ಸಮಯ ಬ್ಯಾಟ್ ಮಾಡಿದ್ದು, “ಭಾರತ ತಂಡವನ್ನು ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಿಸಲು ಜಾಣ್ಮೆಯಿಂದ ಮಾಡಿದ ತಂತ್ರ” ಎಂದು ಕಾನ್ರಾಡ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಅದರ ಬಗ್ಗೆ ಪ್ರತಿಕ್ರಿಯಿಸಿದ ಕುಂಬ್ಳೆ, “ಇತಿಹಾಸದಲ್ಲೂ ಇಂಗ್ಲೆಂಡ್ ನಾಯಕರು ಇದೇ ರೀತಿಯಲ್ಲಿ ಮಾತನಾಡಿ ಬಳಿಕ ಸೋತಿದ್ದರು. ಈಗಲೂ ಅಹಂಕಾರದ ಮಾತುಗಳು ಸರಿಯಲ್ಲ” ಎಂದು ಹೇಳಿದ್ದಾರೆ.

ಕುಂಬ್ಳೆ ಮುಂದುವರಿದು, “ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ಎದುರಾಳಿ ತಂಡದ ಬಗ್ಗೆ ಕೆಟ್ಟ ಮಾತುಗಳನ್ನಾಡುವುದು ಕ್ರೀಡಾಸ್ಫೂರ್ತಿಗೆ ವಿರುದ್ಧ. ಕೋಚ್ ಅಥವಾ ಸ್ಟಾಫ್‌ನಿಂದ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ. ಉತ್ತರ ನೀಡಬೇಕೆಂದರೆ ಬ್ಯಾಟ್-ಬಾಲ್‌ನಿಂದ ಉತ್ತರ ಕೊಡಿ, ಮಾತಿನಿಂದಲ್ಲ” ಎಂದು ಸಂದೇಶ ನೀಡಿದ್ದಾರೆ.

ಇತ್ತ ಮೈದಾನದಲ್ಲಿ ಇಂಡಿಯಾ ಮತ್ತೊಮ್ಮೆ ಕುಸಿತ ಕಂಡಿದೆ. 534 ರನ್‌ಗಳ ಹಿನ್ನಡೆಯೊಂದಿಗೆ ಆರಂಭಿಸಿದ ಭಾರತ ತಂಡ, ದಕ್ಷಿಣ ಆಫ್ರಿಕಾ ಸ್ಪಿನ್ನರ್ ಹಾರ್ಮರ್ ಬಲೆಗೆ ಬಿದ್ದು ಒಂದರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿತು. ಸಾಯಿ ಸುದರ್ಶನ್ (14), ಕುಲದೀಪ್ ಯಾದವ್ (5), ಧ್ರುವ್ ಜುರೆಲ್ (2), ಹಂಗಾಮಿ ನಾಯಕ ರಿಷಭ್ ಪಂತ್ (13) ಬೇಗನೇ ಔಟ್ ಆಗಿ ತಂಡದ ಒತ್ತಡ ಹೆಚ್ಚಿಸಿದರು.

ದಕ್ಷಿಣ ಆಫ್ರಿಕಾ ತಂಡ ಐತಿಹಾಸಿಕ ಗೆಲುವಿಗೆ ಕೇವಲ 4 ವಿಕೆಟ್ ಅಂತರದಲ್ಲಿದ್ದು, ಭಾರತ ತಂಡದ ಹೋರಾಟ ಅಂತಿಮ ದಿನ ನಿರ್ಣಾಯಕ ಹಂತವನ್ನು ತಲುಪಿದೆ.

Trending

Exit mobile version