ದೇಶ
INDIA- AMERICA : ಟ್ರಂಪ್ ಆಡಳಿತದ ಹೊಸ ವ್ಯಾಪಾರ ನೀತಿ
ನವದೆಹಲಿ: ಭಾರತದ ಜೊತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದದ (Interim Trade Deal) ಭಾಗವಾಗಿ ಉಭಯ ರಾಷ್ಟ್ರಗಳ ನಡುವೆ ಯಾವೆಲ್ಲಾ ಕ್ಷೇತ್ರಗಳಲ್ಲಿ ವಹಿವಾಟು ನಡೆಯಲಿದೆ ಎಂಬ ವಿವರಗಳನ್ನೊಳಗೊಂಡ ಫ್ಯಾಕ್ಟ್ ಶೀಟ್ ಅನ್ನು ಅಮೆರಿಕ ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದೆ.
ಮುಂದಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕ ಪರಸ್ಪರ ಲಾಭದಾಯಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಹಾಕಲಿವೆ. ಸೇವೆಗಳು, ಹೂಡಿಕೆ, ಕಾರ್ಮಿಕ, ಸರ್ಕಾರಿ ಖರೀದಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಬಾಕಿ ಇರುವ ಮಾತುಕತೆ ಮುಂದುವರಿಯಲಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
ಫ್ಯಾಕ್ಟ್ ಶೀಟ್ ಪ್ರಕಾರ, ಭಾರತವು ಅಮೆರಿಕದ ಕೈಗಾರಿಕಾ ಸರಕುಗಳು, ಆಹಾರ ಹಾಗೂ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕುವ ಅಥವಾ ಕಡಿಮೆ ಮಾಡುವ ನಿರ್ಧಾರ ಕೈಗೊಳ್ಳಲಿದೆ. ಇದರಲ್ಲಿ ಒಣಗಿದ ಡಿಸ್ಟಿಲರ್ ಧಾನ್ಯಗಳು, ಕೆಂಪು ಸೋರ್ಗಮ್, ಮರದ ಬೀಜಗಳು, ಹಣ್ಣುಗಳು, ದ್ವಿದಳ ಧಾನ್ಯಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಗಳು ಸೇರಿವೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಪ್ರಾಸ್ಪರಸ್ ಪಾತ್ ಫಾರ್ವರ್ಡ್’ ನೀತಿಯಡಿ, ಅಮೆರಿಕದ ರಫ್ತುದಾರರಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವುದು ಹಾಗೂ ಆರ್ಥಿಕ-ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಫ್ಯಾಕ್ಟ್ ಶೀಟ್ ತಿಳಿಸಿದೆ.
ಈ ನಡುವೆ ಭಾರತವು ಕೃಷಿ ಉತ್ಪನ್ನಗಳ ಮೇಲೆ ಶೇಕಡಾ 37 ಮತ್ತು ಕೆಲವು ಆಟೋಮೊಬೈಲ್ ವಸ್ತುಗಳ ಮೇಲೆ ಶೇಕಡಾ 100ಕ್ಕಿಂತ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂಬುದನ್ನೂ ಅಮೆರಿಕ ಉಲ್ಲೇಖಿಸಿದೆ. ಫೆಬ್ರವರಿ 7ರಂದು ಉಭಯ ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದಿಂದ ರಫ್ತಾಗುವ ವಸ್ತುಗಳ ಮೇಲಿನ ಸುಂಕವನ್ನು ಅಮೆರಿಕ ಶೇಕಡಾ 50ರಿಂದ 18ಕ್ಕೆ ಇಳಿಸುವುದಾಗಿ ಘೋಷಿಸಿತ್ತು.